ವಿಜಯಸಾಕ್ಷಿ ಸುದ್ದಿ, ಧಾರವಾಡ: ಗ್ರಾಮ ಪಂಚಾಯಿತಿ ವ್ಯಾಪ್ತಿ ಬದಲಾವಣೆಯ ಹಿನ್ನೆಲೆಯಲ್ಲಿ ಪುನರ್‌ರಚನೆಗೊಂಡಿರುವ ಚಾಕಲಬ್ಬಿ ಹಾಗೂ ರೊಟ್ಟಿಗವಾಡ ಗ್ರಾಮ ಪಂಚಾಯಿತಿಗಳ ಕ್ಷೇತ್ರವಾರು ಸ್ಥಾನಗಳು ಮತ್ತು ಮೀಸಲಾತಿ ವಿವರಗಳನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ.
ಪುನರ್‌ರಚನೆಯಾದ ಚಾಕಲಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 9 ಸ್ಥಾನಗಳಿದ್ದು, ಚಾಕಲಬ್ಬಿ-1 ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ‘ಅ’, ಸಾಮಾನ್ಯ ತಲಾ ಒಂದು ಸ್ಥಾನ ಹಾಗೂ ಚಾಕಲಬ್ಬಿ-2 ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ, ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ ತಲಾ ಒಂದು ಸ್ಥಾನ ಮೀಸಲಿರಿಸಲಾಗಿದೆ. ಹೊಸಳ್ಳಿ ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮಹಿಳೆ, ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ತಲಾ ಒಂದು ಸ್ಥಾನ ನಿಗದಿಪಡಿಸಲಾಗಿದೆ.
ಇದೇ ರೀತಿ, ರೊಟ್ಟಿಗವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 10 ಸ್ಥಾನಗಳಿದ್ದು, ರೊಟ್ಟಿಗವಾಡ-1 ಕ್ಷೇತ್ರಕ್ಕೆ ಹಿಂದುಳಿದ ವರ್ಗ ‘ಅ’ ಮಹಿಳೆ, ಹಿಂದುಳಿದ ವರ್ಗ ‘ಬ’, ಸಾಮಾನ್ಯ ಮಹಿಳೆ ಹಾಗೂ ಸಾಮಾನ್ಯ ತಲಾ ಒಂದು ಸ್ಥಾನ ಮೀಸಲಿರಿಸಲಾಗಿದೆ. ರೊಟ್ಟಿಗವಾಡ-2 ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮಹಿಳೆ, ಹಿಂದುಳಿದ ವರ್ಗ ‘ಅ’ ಮಹಿಳೆ ಹಾಗೂ ಸಾಮಾನ್ಯ ಒಂದು ಸ್ಥಾನ ಮೀಸಲಾಗಿದೆ. ಕೊಂಕಣಕುರಹಟ್ಟಿ ಕ್ಷೇತ್ರಕ್ಕೆ ಅನುಸೂಚಿತ ಪಂಗಡ ಮಹಿಳೆ ಹಾಗೂ ಸಾಮಾನ್ಯ ವರ್ಗಕ್ಕೆ ಎರಡು ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ಧಾರವಾಡ ತಾಲೂಕಿನ ಗುಳೇದಕೊಪ್ಪ, ತೇಗೂರ ಹಾಗೂ ಕುಂದಗೋಳ ತಾಲೂಕಿನ ಬರದ್ವಾಡ, ಚಾಕಲಬ್ಬಿ ಮತ್ತು ರೊಟ್ಟಿಗವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಈ ಕುರಿತು ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ ಜೂನ್ 25ರ ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಗೆ ಖುದ್ದಾಗಿ ಸಲ್ಲಿಸಬಹುದಾಗಿದೆ.
ನಿಗದಿತ ಅವಧಿಯ ನಂತರ ಸಲ್ಲಿಕೆಯಾಗುವ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ. ಸ್ವೀಕೃತ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



