ಬೆಂಗಳೂರು: ಚಂದ್ರಲೇಔಟ್ನಲ್ಲಿರುವ ನ್ಯೂ ಲೈಫ್ ರಿಹ್ಯಾಬ್ ಸೆಂಟರ್ ಮಾಲೀಕ ಶಿವಲಿಂಗಯ್ಯ ಹತ್ಯೆ ಪ್ರಕರಣದ ಬಳಿಕ ನಗರದ ಇತರೆ ಪುನರ್ವಸತಿ ಕೇಂದ್ರಗಳ ಮಾಲೀಕರಲ್ಲಿ ಆತಂಕ ಮನೆ ಮಾಡಿದೆ.
ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಹಲವು ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಿಹ್ಯಾಬ್ ಕೇಂದ್ರದಲ್ಲಿದ್ದ ನಿತಿನ್ ಎಂಬಾತನನ್ನು ಬಿಡಿಸಿಕೊಂಡು ಹೋಗುವ ಉದ್ದೇಶದಿಂದಲೇ ಹತ್ಯೆ ನಡೆಸಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಕೃತ್ಯ ಪೂರ್ವನಿಯೋಜಿತವಾಗಿದ್ದು, ಎಂಟರಿಂದ ಒಂಬತ್ತು ಮಂದಿ ದುಷ್ಕರ್ಮಿಗಳು ಸಂಚಿನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಹತ್ಯೆಯ ಬಳಿಕ ಆರೋಪಿಗಳು ಸ್ಥಳದಿಂದ ಒಂದು ಬ್ಯಾಗ್ನ್ನು ತೆಗೆದುಕೊಂಡು ಹೋಗಿರುವ ಮಾಹಿತಿ ಲಭ್ಯವಾಗಿದೆ. ಬ್ಯಾಗ್ನಲ್ಲಿ ಹಣ ಇತ್ತೇ ಅಥವಾ ರಿಹ್ಯಾಬ್ನಲ್ಲಿದ್ದ ವ್ಯಕ್ತಿಯ ಬಟ್ಟೆಗಳಿದ್ದವೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ತುಂಬಾ ದಿನಗಳಿಂದಲೇ ಹತ್ಯೆಯ ಸಂಚು ರೂಪಿಸಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದ್ದು, ಘಟನೆ ನಡೆದ ವೇಳೆ ಮಾಲೀಕನ ಪುತ್ರ ಹಾಗೂ ಚಾಲಕ ಸ್ಥಳದಲ್ಲಿ ಇರದಿರುವುದನ್ನು ಗಮನಿಸಿ ದುಷ್ಕರ್ಮಿಗಳು ದಾಳಿ ನಡೆಸಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರಕರಣದ ಬೆನ್ನಲ್ಲೇ ನಗರದ ಇತರೆ ಪುನರ್ವಸತಿ ಕೇಂದ್ರಗಳ ಕಾರ್ಯವೈಖರಿ ಹಾಗೂ ಭದ್ರತಾ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ.
ಚಂದ್ರಲೇಔಟ್ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಹಂತಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.



