ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೂನ್ 21ರಂದು (ಭಾನುವಾರ) ಬೃಹತ್ ಪಾದಯಾತ್ರೆ ನಡೆಯಲಿದೆ. ರೈತರ ಭೂಮಿ ಹಾಗೂ ಜೀವನೋಪಾಯವನ್ನು ಉಳಿಸುವ ಉದ್ದೇಶದಿಂದ ಈ ಹೋರಾಟ ಆಯೋಜಿಸಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
This isn’t just a march. It’s a fight for our survival.
Our land is our mother. It’s the sweat of our farmers and the blood of our workers. Today, under the guise of a "Township," a massive ₹33,562 crore real estate scam is trying to snatch away what is rightfully ours. We… pic.twitter.com/0WZdGJV44y
— Nikhil Kumar (@Nikhil_Kumar_k) June 17, 2026
ಬೆಳಗ್ಗೆ 9 ಗಂಟೆಗೆ ಅಂಚಿಪುರ ಗ್ರಾಮದಿಂದ ಆರಂಭವಾಗಲಿರುವ ಪಾದಯಾತ್ರೆಯು ಅಂಚಿಪುರ ಕಾಲೊನಿ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಸೇರಿದಂತೆ ಎಂಟು ಗ್ರಾಮಗಳ ಮೂಲಕ ಹೊಸೂರುವರೆಗೆ ಸಾಗಲಿದೆ. ಪಾದಯಾತ್ರೆಯ ಸಮಾರೋಪ ಹೊಸೂರಿನಲ್ಲಿ ನಡೆಯಲಿರುವ ಬಹಿರಂಗ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ.
ಈ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, “ನಮ್ಮ ಭೂಮಿ, ನಮ್ಮ ಹಕ್ಕು” ಎಂಬ ಘೋಷಣೆಯೊಂದಿಗೆ ರೈತರ ಬದುಕು ಮತ್ತು ಕೃಷಿ ಚಟುವಟಿಕೆಗಳನ್ನು ಉಳಿಸಲು ಈ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು. ಅಂಚಿಪುರ, ಬನ್ನಿಗಿರಿ, ಗೊಲ್ಲಹಳ್ಳಿ ಸೇರಿದಂತೆ ಎಂಟು ಗ್ರಾಮಗಳ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
ಬಿಡದಿ ಟೌನ್ಶಿಪ್ ಯೋಜನೆಯಡಿ ಅಂಚಿಪುರ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 518 ಎಕರೆ ಕೃಷಿ ಭೂಮಿಗೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಇದರ ಜೊತೆಗೆ ಹೆಚ್ಚುವರಿ 7,481 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ ಎಂದು ನಿಖಿಲ್ ಆರೋಪಿಸಿದರು.
ಈ ಯೋಜನೆಯಿಂದ 755 ರೈತ ಕುಟುಂಬಗಳು, ತಿಂಗಳಿಗೆ ಸುಮಾರು 6 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಹೈನುಗಾರಿಕೆ, ರೇಷ್ಮೆ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ತೀವ್ರ ಹಾನಿಯಾಗಲಿದ್ದು, ಸುಮಾರು 10 ಲಕ್ಷ ಹಸಿರು ಮರಗಳು ನಾಶವಾಗುವ ಆತಂಕವಿದೆ ಎಂದು ಅವರು ಹೇಳಿದರು.
ಕಳೆದ 450 ದಿನಗಳಿಂದ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಇನ್ನೂ ರೈತರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ಈ ಹೋರಾಟ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದೆ, ಪಕ್ಷಾತೀತವಾಗಿ ರೈತರ ಹಕ್ಕುಗಳಿಗಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ರೈತರ ಜಮೀನನ್ನು ಉಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ ಅವರು, ಜೂನ್ 21ರಂದು ಅಂಚಿಪುರದಿಂದ ಹೊಸೂರಿಗೆ ನಡೆಯುವ ಪಾದಯಾತ್ರೆಯಲ್ಲಿ ರೈತರು, ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.



