ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸ್ಪೂರ್ತಿದಾಯಕ ಜೀವನವನ್ನು ತೆರೆಗೆ ತರುವ ಮಹತ್ವದ ಪ್ರಯತ್ನಕ್ಕೆ ಬಾಲಿವುಡ್ನ ಸ್ಟಾರ್ ನಿರ್ಮಾಪಕ ಆಮಿರ್ ಖಾನ್ ಮುಂದಾಗಿದ್ದಾರೆ. ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ವಿಶೇಷ ಡಾಕ್ಯುಮೆಂಟರಿಯನ್ನು ಖ್ಯಾತ ಬರಹಗಾರ್ತಿ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ನಿರ್ದೇಶಿಸುತ್ತಿದ್ದಾರೆ.
ದ್ರೌಪದಿ ಮುರ್ಮು ಅವರ ಬಾಲ್ಯ, ಒಡಿಶಾದ ಗ್ರಾಮೀಣ ಬದುಕು, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿನ ಅವರ ಏರಿಕೆ ಮತ್ತು ರಾಷ್ಟ್ರಪತಿ ಹುದ್ದೆವರೆಗೆ ತಲುಪಿದ ಐತಿಹಾಸಿಕ ಪಯಣವನ್ನು ಡಾಕ್ಯುಮೆಂಟರಿ ದಾಖಲಿಸಲಿದೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣಗಳ ಜೊತೆಗೆ, ವೈಯಕ್ತಿಕ ಬದುಕಿನ ಕಷ್ಟಕರ ಅಧ್ಯಾಯಗಳನ್ನೂ ಚಿತ್ರದಲ್ಲಿ ಒಳಗೊಂಡಿರಲಿದೆ.
ಮೂಲಗಳ ಪ್ರಕಾರ, ಡಾಕ್ಯುಮೆಂಟರಿಯ ಪ್ರಮುಖ ಚಿತ್ರೀಕರಣವನ್ನು ಒಡಿಶಾದಲ್ಲೇ ನಡೆಸಲಾಗಿದೆ. ದ್ರೌಪದಿ ಮುರ್ಮು ಅವರ ಬಾಲ್ಯದ ನೆನಪುಗಳನ್ನು ಜೀವಂತಗೊಳಿಸುವ ಉದ್ದೇಶದಿಂದ ಸ್ಥಳೀಯ ಕಲಾವಿದರ ನೆರವಿನಿಂದ ಹಲವಾರು ದೃಶ್ಯಗಳನ್ನು ಮರುನಿರ್ಮಿಸಲಾಗಿದೆ.
2022ರಲ್ಲಿ ಭಾರತದ 15ನೇ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ದ್ರೌಪದಿ ಮುರ್ಮು, ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಹಾಗೂ ಮೊದಲ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿಯಾಗಿ ಇತಿಹಾಸ ನಿರ್ಮಿಸಿದ್ದರು. ಅವರ ಈ ಅಸಾಧಾರಣ ಸಾಧನೆಯ ಹಿಂದಿನ ಹೋರಾಟವನ್ನು ಡಾಕ್ಯುಮೆಂಟರಿ ಮೂಲಕ ಜಗತ್ತಿಗೆ ಪರಿಚಯಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.
ಇದೀಗ ಆಮಿರ್ ಖಾನ್ ಪ್ರೊಡಕ್ಷನ್ಸ್ ಹಲವು ಮಹತ್ವದ ಯೋಜನೆಗಳಲ್ಲಿ ತೊಡಗಿಕೊಂಡಿದ್ದು, ದ್ರೌಪದಿ ಮುರ್ಮು ಕುರಿತ ಈ ಡಾಕ್ಯುಮೆಂಟರಿ ಅವರ ನಿರ್ಮಾಣ ಸಂಸ್ಥೆಯ ಮತ್ತೊಂದು ಗಮನಾರ್ಹ ಪ್ರಯತ್ನವಾಗಿ ಹೊರಹೊಮ್ಮಿದೆ.



