ಬೆಂಗಳೂರು: ಮನೆಗೆ ಚಾಚಿಕೊಂಡಿದ್ದ ಮರದ ಕೊಂಬೆಗಳನ್ನು ಕತ್ತರಿಸಲು ಯತ್ನಿಸಿದ ವೇಳೆ ಟೆರಸ್ ಮೇಲಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
ಪ್ರಮೀಳಾ ಬಾಯಿ (58) ಮೃತ ಮಹಿಳೆ. ಜೂನ್ 18ರಂದು ಸಂಜೆ 5 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾಜಾಜಿನಗರದಲ್ಲಿರುವ ತಮ್ಮ ಮನೆಯ ಬಳಿ ಬೆಳೆದಿದ್ದ ಮರದ ಕೊಂಬೆಗಳು ಮನೆಗೆ ಚಾಚಿಕೊಂಡಿದ್ದ ಕಾರಣ, ಅವುಗಳನ್ನು ಕತ್ತರಿಸುವಂತೆ ಸಂಬಂಧಪಟ್ಟ ಜಿಬಿಎ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರಮೀಳಾ ಬಾಯಿ ಸ್ವತಃ ಕೊಂಬೆಗಳನ್ನು ಕತ್ತರಿಸಲು ಮುಂದಾಗಿದ್ದರು ಎನ್ನಲಾಗಿದೆ.
ಟೆರಸ್ ಮೇಲೆ ನಿಂತು ಮರದ ಕೊಂಬೆ ಕತ್ತರಿಸುತ್ತಿದ್ದ ವೇಳೆ, ಕೊಠಡಿಯೊಂದರ ಮೇಲ್ಭಾಗಕ್ಕೆ ಅಳವಡಿಸಲಾಗಿದ್ದ ಶೀಟ್ ಮೇಲೆ ಅವರು ಕಾಲಿಟ್ಟಿದ್ದಾರೆ. ಈ ವೇಳೆ ಶೀಟ್ ಮುರಿದು ಹೋಗಿದ್ದು, ಪ್ರಮೀಳಾ ಬಾಯಿ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.
ತಲೆ ಕೆಳಗಾಗಿ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



