ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ನೇತೃತ್ವದಲ್ಲಿ ಆಯೋಜಿಸಿರುವ ಬೃಹತ್ ಪಾದಯಾತ್ರೆಯಲ್ಲಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಇದು ಕೇವಲ ಆರಂಭ ಮಾತ್ರ, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್ ನೇತೃತ್ವದಲ್ಲಿ ಆರಂಭವಾದ ಈ ಪಾದಯಾತ್ರೆ ಯೋಜನೆ ವ್ಯಾಪ್ತಿಯ ಎಂಟು ಗ್ರಾಮಗಳಲ್ಲಿ ಸುಮಾರು 11 ಕಿಲೋಮೀಟರ್ ಸಂಚರಿಸಿತು. ಬೆಳಗ್ಗೆ ಅಂಚಿಪುರ ಗ್ರಾಮದ ದಂಡಿನ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಿದರು.
ಪಾದಯಾತ್ರೆಯು ಅಂಚಿಪುರ, ಅಂಚಿಪುರ ಕಾಲೋನಿ, ಬನ್ನಿಗಿರಿ, ಮೆರೆವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಹಾಗೂ ಹೊಸೂರು ಗ್ರಾಮಗಳ ಮೂಲಕ ಸಾಗಿತು. ಸಾವಿರಾರು ರೈತರು, ಜೆಡಿಎಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದು, ಎಂಎಲ್ಸಿ ಜವರಾಯಿಗೌಡ ಮತ್ತು ಮಾಜಿ ಎಂಎಲ್ಸಿ ಶ್ರೀಕಂಠೇಗೌಡ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, “ಇದು ರಾಜಕೀಯ ಲಾಭ-ನಷ್ಟಕ್ಕಾಗಿ ನಡೆಸುತ್ತಿರುವ ಹೋರಾಟವಲ್ಲ. ರೈತರ ಬದುಕು, ಕೃಷಿ ಭೂಮಿ ಮತ್ತು ಅವರ ಹಕ್ಕುಗಳನ್ನು ಉಳಿಸುವ ಉದ್ದೇಶದಿಂದ ಈ ಪಾದಯಾತ್ರೆ ನಡೆಸಲಾಗುತ್ತಿದೆ” ಎಂದು ಹೇಳಿದರು.
“ಇದು ಒಂದು ದಿನದ ಹೋರಾಟವಲ್ಲ. ಕೇವಲ ಭಾಷಣಕ್ಕೆ ಸೀಮಿತವಾಗುವ ಕಾರ್ಯಕ್ರಮವೂ ಅಲ್ಲ. ಇದು ಆರಂಭ ಮಾತ್ರ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದರು.
ಟೌನ್‌ಶಿಪ್ ಯೋಜನೆಗೆ ಒಪ್ಪಿಗೆ ಪಡೆಯಲು ರೈತರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದ ನಿಖಿಲ್, “ಕೃಷಿ ಭೂಮಿ ಕಳೆದುಕೊಂಡರೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಈ ಯೋಜನೆಯಿಂದ ಸಣ್ಣ ರೈತರಿಗೆ ಹೆಚ್ಚಿನ ಅನ್ಯಾಯವಾಗಲಿದೆ. ರೈತರ ಭೂಮಿ ಕಬಳಿಸಲು ದಲ್ಲಾಳಿಗಳನ್ನು ಬಳಸಲಾಗುತ್ತಿದ್ದು, ರೈತರ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ” ಎಂದು ಸರ್ಕಾರದ ವಿರುದ್ಧ ಆರೋಪಿಸಿದರು.



