ಬೆಂಗಳೂರು: ನಗರದ ಹಲವು ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಆಹಾರ ವಿತರಣೆಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ವಿವಿಧ ಫುಡ್ ಡೆಲಿವರಿ ಆ್ಯಪ್ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ನಿಷೇಧಿಸಿ ಪೋಷಕರಿಗೆ ಸೂಚನೆ ನೀಡಲಾಗುತ್ತಿದೆ.
ಇತ್ತೀಚೆಗೆ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ಈ ಕುರಿತು ಪೋಷಕರಿಗೆ ಸುತ್ತೋಲೆ ಹೊರಡಿಸಿದ್ದು, ಇದೇ ಮಾದರಿಯ ನಿಯಮವನ್ನು ನಗರದ ಇನ್ನೂ ಹಲವು ಪ್ರಮುಖ ಶಾಲೆಗಳು ಜಾರಿಗೆ ತರಲು ಮುಂದಾಗಿವೆ.
ಶಾಲಾ ಆಡಳಿತ ಮಂಡಳಿಗಳ ಪ್ರಕಾರ, ಹೊರಗಿನಿಂದ ತರಿಸುವ ಜಂಕ್ ಫುಡ್ಗಳಲ್ಲಿ ಅತಿಯಾದ ಎಣ್ಣೆ, ಉಪ್ಪು ಹಾಗೂ ಸಂರಕ್ಷಕ ಪದಾರ್ಥಗಳು (ಪ್ರಿಸರ್ವೇಟಿವ್ಸ್) ಬಳಸಲಾಗುತ್ತದೆ. ಇಂತಹ ಆಹಾರ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದ್ದು, ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದಲ್ಲದೆ, ಒಬ್ಬ ವಿದ್ಯಾರ್ಥಿ ಮನೆಯಿಂದ ತಂದಿರುವ ಸಾಮಾನ್ಯ ಆಹಾರ ಸೇವಿಸುತ್ತಿರುವಾಗ, ಮತ್ತೊಬ್ಬ ವಿದ್ಯಾರ್ಥಿ ಪಿಜ್ಜಾ ಅಥವಾ ಬರ್ಗರ್ನಂತಹ ಆಹಾರವನ್ನು ಆನ್ಲೈನ್ ಮೂಲಕ ತರಿಸಿಕೊಂಡು ಸೇವಿಸಿದರೆ ಮಕ್ಕಳಲ್ಲಿ ಅನಗತ್ಯ ಹೋಲಿಕೆ, ಆಕರ್ಷಣೆ ಹಾಗೂ ತಾರತಮ್ಯದ ಭಾವನೆ ಮೂಡಬಹುದು. ಇದರಿಂದ ಪೋಷಕರ ಮೇಲೂ ಹೆಚ್ಚುವರಿ ಒತ್ತಡ ಉಂಟಾಗುತ್ತದೆ ಎಂದು ಶಾಲಾ ಆಡಳಿತಗಳು ಅಭಿಪ್ರಾಯಪಟ್ಟಿವೆ.
ಭದ್ರತೆಯ ದೃಷ್ಟಿಯಿಂದಲೂ ಈ ಕ್ರಮ ಮಹತ್ವದ್ದಾಗಿದೆ ಎಂದು ಶಾಲೆಗಳು ತಿಳಿಸಿವೆ. ಅಪರಿಚಿತ ಡೆಲಿವರಿ ಸಿಬ್ಬಂದಿ ಪದೇ ಪದೇ ಶಾಲಾ ಆವರಣಕ್ಕೆ ಪ್ರವೇಶಿಸುವುದು ಸುರಕ್ಷತಾ ದೃಷ್ಟಿಯಿಂದ ಸೂಕ್ತವಲ್ಲ. ಜೊತೆಗೆ ಪ್ರತಿನಿತ್ಯ ಹಲವು ಆಹಾರ ಪಾರ್ಸೆಲ್ಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಕ್ರಿಯೆ ಶಾಲೆಯ ಶಿಸ್ತು ಹಾಗೂ ಕಲಿಕಾ ವಾತಾವರಣಕ್ಕೂ ಅಡ್ಡಿಯಾಗುತ್ತದೆ ಎಂದು ಹೇಳಲಾಗಿದೆ.
ಅನಿವಾರ್ಯ ಸಂದರ್ಭಗಳಲ್ಲಿ ಪೋಷಕರು ಮನೆಯಲ್ಲಿ ಆಹಾರ ತಯಾರಿಸಲು ಸಾಧ್ಯವಾಗದಿದ್ದರೆ, ಹೊರಗಿನಿಂದ ತರಿಸುವ ಆರೋಗ್ಯಕರ ಆಹಾರವನ್ನು ಸಾಮಾನ್ಯ ಲಂಚ್ ಬಾಕ್ಸ್ನಲ್ಲಿ ಪ್ಯಾಕ್ ಮಾಡಿ ಮಕ್ಕಳಿಗೆ ಕಳುಹಿಸುವಂತೆ ಶಾಲೆಗಳು ಮನವಿ ಮಾಡಿವೆ.
ವಿದ್ಯಾರ್ಥಿಗಳಿಗೆ ಮಾದರಿಯಾಗುವ ಉದ್ದೇಶದಿಂದ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗೂ ಆನ್ಲೈನ್ ಮೂಲಕ ಆಹಾರ ಆರ್ಡರ್ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.



