ವಿಜಯಪುರ: ಭೀಮಾತೀರದಲ್ಲಿ ನಡೆದ 6 ಜನರ ಭೀಕರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹೇಶ್ ತಳವಾರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಇಟ್ಟಿಂಗಿಹಾಳ ಗ್ರಾಮದ ಹೊರವಲಯದಲ್ಲಿ ಆರೋಪಿ ಪತ್ತೆಯಾದ ವೇಳೆ ಚಡಚಣ ಪೊಲೀಸರು ಬಂಧಿಸಲು ಮುಂದಾದಾಗ ಮಹೇಶ್ ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಆತ ಪೊಲೀಸರ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಸಿಬ್ಬಂದಿ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮೊದಲು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆದರೂ ಆರೋಪಿ ಜಗ್ಗದೆ ಹಲ್ಲೆ ಮುಂದುವರಿಸಿದ ಕಾರಣ, ಚಡಚಣ ಸಿಪಿಐ ಪರಶುರಾಮ್ ಮನಗೂಳಿ ಅವರು ಆರೋಪಿ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಯಲ್ಲಿ ಚಡಚಣ ಠಾಣೆ ಸಿಬ್ಬಂದಿ ಶೇಖರ್ ಪವಾರ್ ಹಾಗೂ ವಿಜಯಕುಮಾರ್ ಬನಸೋಡೆ ಗಾಯಗೊಂಡಿದ್ದು, ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೇ 29ರಂದು ಚಡಚಣ ವ್ಯಾಪ್ತಿಯ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ನಿರಾಳೆ ಕುಟುಂಬದ 5 ಮಂದಿ ಸೇರಿದಂತೆ ಒಟ್ಟು 6 ಜನರ ಭೀಕರ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ತಳವಾರ್ ಮತ್ತು ಆತನ ಗ್ಯಾಂಗ್ 15 ಲಕ್ಷ ರೂಪಾಯಿ ಸುಪಾರಿ ಪಡೆದಿದ್ದರೆಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
23 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಅಡಗಿದ್ದ ಮಹೇಶ್ ತಳವಾರ್ ಇದೀಗ ಬಂಧಿತನಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.



