ಹೈದರಾಬಾದ್: ನಟಿ ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಸಮಂತಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಗೆ ಅವರ ಆಪ್ತೆ ಹಾಗೂ ನಿರ್ದೇಶಕಿ ನಂದಿನಿ ರೆಡ್ಡಿ ನೀಡಿರುವ ಹೇಳಿಕೆ ಮತ್ತಷ್ಟು ಬಲ ತುಂಬಿದ್ದು, ಸಿನಿ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ‘ಮಾ ಇಂಟಿ ಬಂಗಾರಂ’ ಚಿತ್ರದ ಯಶಸ್ಸಿನ ಸಂಭ್ರಮದ ನಡುವೆ ಈ ಬೆಳವಣಿಗೆ ನಡೆದಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲಿ ನಡೆದ ಸಕ್ಸಸ್ ಮೀಟ್‌ನಲ್ಲಿ ಸಮಂತಾ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ವಿಶೇಷವಾಗಿ ಅವರ ದೇಹದ ಬದಲಾವಣೆ ಗಮನಿಸಿದ ಅಭಿಮಾನಿಗಳು, ಸಮಂತಾ ಗರ್ಭಿಣಿಯಾಗಿರಬಹುದೇ ಎಂಬ ಪ್ರಶ್ನೆ ಎತ್ತಿದ್ದರು.
ಈ ನಡುವೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕಿ ನಂದಿನಿ ರೆಡ್ಡಿ, “ಅವಳ ಪ್ರೆಗ್ನೆನ್ಸಿ ಸರಿಯಾದ ಹಾಗೂ ಸುಂದರ ಸಮಯದಲ್ಲಿ ಬಂದಿದೆ. ನಮ್ಮ ಸಿನಿಮಾ ಕೂಡ ಯಶಸ್ಸು ಕಂಡಿದೆ” ಎಂದು ಹೇಳಿರುವುದು ಕುತೂಹಲ ಹೆಚ್ಚಿಸಿದೆ.
ನಾಗ ಚೈತನ್ಯ ಅವರೊಂದಿಗಿನ ವಿಚ್ಛೇದನದ ಬಳಿಕ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಸಮಂತಾ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿರಲಿಲ್ಲ.
ಈಗ ನಂದಿನಿ ರೆಡ್ಡಿ ಅವರ ಹೇಳಿಕೆಯ ಬೆನ್ನಲ್ಲೇ ಸಮಂತಾ ತಾಯಿ ಆಗಲಿದ್ದಾರೆ ಎಂಬ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆದರೆ ನಟಿ ಅಥವಾ ಅವರ ತಂಡದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.



