ವಿಜಯಸಾಕ್ಷಿ ಸುದ್ದಿ, ಡಂಬಳ: ಹಿಂದೂ-ಮುಸ್ಲಿಮರ ಭಾವೈಕ್ಯತೆ ಹಾಗೂ ಸೌಹಾರ್ದದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು ಎಂದು ಮುಂಡರಗಿ ಪೊಲೀಸ್ ಠಾಣೆಯ ಸಿಪಿಐ ಅಯ್ಯನಗೌಡ್ರ ಪಾಟೀಲ ಹೇಳಿದರು.
ಗ್ರಾಮದ ಪೊಲೀಸ್ ಹೊರಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ಹಬ್ಬಗಳು ಸಮಾಜದಲ್ಲಿ ಸೌಹಾರ್ದ, ಸಹಬಾಳ್ವೆ ಮತ್ತು ಪರಸ್ಪರ ವಿಶ್ವಾಸವನ್ನು ಬಲಪಡಿಸುವ ಮಾಧ್ಯಮಗಳಾಗಿವೆ. ಪ್ರತಿವರ್ಷದಂತೆ ಈ ಬಾರಿಯೂ ಮೊಹರಂ ಹಬ್ಬವನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಿಸಬೇಕು ಎಂದು ತಿಳಿಸಿದರು.
ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಹಬ್ಬದ ಆಚರಣೆಯಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಶಾಂತಿ, ಸೌಹಾರ್ದ ಮತ್ತು ಪರಸ್ಪರ ಗೌರವದ ವಾತಾವರಣದಲ್ಲಿ ಹಬ್ಬವನ್ನು ಆಚರಿಸುವ ಮೂಲಕ ಉತ್ತಮ ಸಂದೇಶ ನೀಡಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಗ್ರಾಮಸ್ಥರು ಮೊಹರಂ ಆಚರಣೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಹಬ್ಬವನ್ನು ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ಧಪ್ಪ ಬಂಡಾರಿ, ಶಿವಾನಂದ ಬಂಡಿ, ರಜಾಕಸಾಬ, ರಾಜೇಸಾಬ ಹಿರೇಮನಿ, ಆರ್. ಆಲೂರ, ರಜಾಸಾಬ ಹುಬ್ಬಳ್ಳಿ, ಸಿದ್ದಪ್ಪ ಹೊಂಬಳ, ಮಳ್ಳಪ್ಪ ಕರಿಗಾರ, ಸೋಮಲಿಂಗಪ್ಪ ತಳಗೇರಿ, ಲಕ್ಷ್ಮಣ ಬೇಟಗೇರಿ, ಕೆ.ಎಂ. ಮಠದ, ಮಹೇಶ ಗುಡ್ಡದ, ಎಸ್.ಐ. ಮಠದ, ಮಹಬೂಬಲಿ ಮೂಲಿಮನಿ, ಹೆಡ್ ಕಾನ್ಸ್ಟೇಬಲ್ ಎಸ್.ಎಸ್. ಕಂಚಗಾರ, ಪೊಲೀಸ್ ಸಿಬ್ಬಂದಿಗಳಾದ ಬಾಬುಜಾನ ಕಮ್ಮಾರ, ನಾಗರಾಜ ಪೂಜಾರ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.



