ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಯೋಗವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ, ಪ್ರತಿದಿನದ ಜೀವನದ ಅವಿಭಾಜ್ಯ ಅಂಗವಾಗಿರಬೇಕು ಎಂದು ಡಾ. ಸಿದ್ದೇಶ್ವರ ಶಿವಸಾಲಿ ಹೇಳಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ, ಏಕಾಗ್ರತೆ ಹಾಗೂ ಆತ್ಮವಿಶ್ವಾಸ ವೃದ್ಧಿಗೆ ಸಹಕಾರಿಯಾಗಿದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಯೋಗಾಭ್ಯಾಸದ ಅಭ್ಯಾಸ ಬೆಳೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಜಿ. ಬಸವನಗೌಡ ಮಾತನಾಡಿ, ಯೋಗವು ಆರೋಗ್ಯದ ಜೀವಾಳವಾಗಿದ್ದು, ನಿಯಮಿತ ಅಭ್ಯಾಸದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಯೋಗದ ವಿವಿಧ ಆಸನಗಳ ಪ್ರದರ್ಶನ, ಸಮೂಹ ಯೋಗಾಭ್ಯಾಸ ಹಾಗೂ ಯೋಗದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆದವು. ವಿದ್ಯಾಕೇಂದ್ರದ ವಿವಿಧ ಪ್ರಕಲ್ಪಗಳ 1,118 ವಿದ್ಯಾರ್ಥಿಗಳು ಸಮೂಹ ಯೋಗಾಸನದಲ್ಲಿ ಭಾಗವಹಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಹಕಾರ್ಯದರ್ಶಿ ದುರ್ಗಣ್ಣ, ಪ್ರಧಾನಾಚಾರ್ಯ ಹೆಚ್.ಎ. ರಂಗನಾಥ, ಮಂಜುನಾಥ ನಂದಿ, ನಾರಾಯಣ ಕೆರೂರ, ಸೋಮನಗೌಡ, ಪ್ರಭುದೇವ್, ಮಧುಕರ್, ವಿನಯ್, ಕೆ. ನಾಗರಾಜ, ಆನಂದ್ ಕಡ್ಲಿ ಸೇರಿದಂತೆ ಪಾಲಕರು, ಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವೀರೇಶ್ ವಾಲಿ ಸ್ವಾಗತಿಸಿದರು. ಕುಮಾರ್ ಆಚಾರ್ ವಂದಿಸಿದರು. ವಿನಯ್ ಕಾರ್ಯಕ್ರಮ ನಿರೂಪಿಸಿದರು.



