ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ ದೊರೆತರೆ ರಾಷ್ಟ್ರಮಟ್ಟದಲ್ಲೂ ತಮ್ಮ ಸಾಮರ್ಥ್ಯ ಪ್ರದರ್ಶಿಸಬಹುದು ಎಂಬುದನ್ನು ಸಮೀಪದ ಜಕ್ಕಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಸೃಷ್ಠಿ ಉಮೇಶ್ ಮೇಟಿ ಸಾಬೀತುಪಡಿಸಿದ್ದಾರೆ. ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ಆಯೋಜಿಸಿದ್ದ ಪ್ರತಿಷ್ಠಿತ ಪರ್ವತಾರೋಹಣ ಹಾಗೂ ಸಾಹಸ ಶಿಬಿರದಲ್ಲಿ ಭಾಗವಹಿಸಿದ್ದ ಅವರು 15,500 ಅಡಿ ಎತ್ತರದ ಹುರ್ರಾ ಟಾಪ್ ಶಿಖರವನ್ನು ಯಶಸ್ವಿಯಾಗಿ ಏರಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಗದಗ ಜಿಲ್ಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸಿದ್ದಾರೆ.
ಗದಗದ ಜೆ.ಟಿ. ಕಾಲೇಜಿನ ವಿದ್ಯಾರ್ಥಿನಿ ಹಾಗೂ 38 ಕೆಎಆರ್ ಬಿಎನ್ ಎನ್‌ಸಿಸಿ ಘಟಕದ ಕೆಡೆಟ್ ಆಗಿರುವ ಸೃಷ್ಠಿ, ಶಿಖರದ ತುದಿಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸುವ ಮೂಲಕ ತಮ್ಮ ಸಾಹಸ, ದೇಶಭಕ್ತಿ ಹಾಗೂ ಆತ್ಮವಿಶ್ವಾಸವನ್ನು ಅನಾವರಣಗೊಳಿಸಿದ್ದಾರೆ. ಈ ಸಾಧನೆಯ ಮೂಲಕ ಅವರು ತಮ್ಮ ಕಾಲೇಜು, ಕೆಎಲ್‌ಇ ಸಂಸ್ಥೆ, ಗದಗ ಜಿಲ್ಲೆ ಹಾಗೂ ಜಕ್ಕಲಿ ಗ್ರಾಮದ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ.
ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ನಡೆದ ಈ ವಿಶೇಷ ಶಿಬಿರದಲ್ಲಿ ಪರ್ವತಾರೋಹಣ, ಟ್ರೆಕ್ಕಿಂಗ್, ಸಾಹಸ ಕ್ರೀಡೆಗಳು, ಪ್ರತಿಕೂಲ ಪರಿಸ್ಥಿತಿಗಳಲ್ಲಿ ಬದುಕುವ ಕೌಶಲ, ನಾಯಕತ್ವ ಗುಣಗಳ ವಿಕಾಸ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಯಿತು. ಈ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಸೃಷ್ಠಿ ತಮ್ಮ ಶಿಸ್ತು, ಪರಿಶ್ರಮ ಹಾಗೂ ದೃಢ ಸಂಕಲ್ಪದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಪರ್ವತಾರೋಹಣವು ಕೇವಲ ದೈಹಿಕ ಸಾಮರ್ಥ್ಯದ ಪರೀಕ್ಷೆಯಲ್ಲ, ಮಾನಸಿಕ ದೃಢತೆ, ತಾಳ್ಮೆ, ಧೈರ್ಯ ಹಾಗೂ ಗುರಿ ಸಾಧಿಸುವ ಛಲದ ಪ್ರತೀಕವಾಗಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ ಶಿಖರವನ್ನು ಯಶಸ್ವಿಯಾಗಿ ಏರಿ ತ್ರಿವರ್ಣ ಧ್ವಜ ಹಾರಿಸಿರುವ ಸೃಷ್ಠಿ ಅವರ ಸಾಧನೆ ಯುವಜನತೆಗೆ ಸ್ಪೂರ್ತಿದಾಯಕವಾಗಿದೆ.
ಸೃಷ್ಠಿ ಅವರ ಸಾಧನೆಗೆ ಪೋಷಕರಾದ ಉಮೇಶ್ ಮೇಟಿ ಹಾಗೂ ಕುಟುಂಬದವರ ನಿರಂತರ ಪ್ರೋತ್ಸಾಹವೂ ಪ್ರಮುಖ ಕಾರಣವಾಗಿದೆ. ಅವರ ಯಶಸ್ಸಿನಿಂದ ಗ್ರಾಮಸ್ಥರು, ಸ್ನೇಹಿತರು, ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಗಣ್ಯರಲ್ಲಿ ಹರ್ಷ ವ್ಯಕ್ತವಾಗಿದೆ.
ಈ ಅಪೂರ್ವ ಸಾಧನೆಗಾಗಿ ಜೆ.ಟಿ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್‌ಸಿಸಿ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಶಿಖರಗಳನ್ನು ಏರಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ.
“ಹುರ್ರಾ ಟಾಪ್ ಶಿಖರದ ಮೇಲೆ ತ್ರಿವರ್ಣ ಧ್ವಜ ಹಾರಿಸಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ಈ ಸಾಧನೆಯನ್ನು ದೇಶ, ಜಿಲ್ಲೆ ಹಾಗೂ ನನ್ನ ಗ್ರಾಮದ ಜನತೆಗೆ ಅರ್ಪಿಸುತ್ತೇನೆ.”
ಸೃಷ್ಠಿ ಉಮೇಶ್ ಮೇಟಿ



