ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮುಂಗಾರು ಮಳೆಗಾಗಿ ವರುಣ ದೇವನ ಕೃಪೆ ಕೋರಿ ಇಲ್ಲಿಯ ರಾಮಲಿಂಗೇಶ್ವರ ಭಜನಾ ಸಂಘದ ಆಶ್ರಯದಲ್ಲಿ ಗುರ್ಜಿ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಸಂಪ್ರದಾಯದಂತೆ ಮಣ್ಣಿನ ಗುರ್ಜಿ ಮೂರ್ತಿಯನ್ನು ಹೊತ್ತುಕೊಂಡ ಬಾಲಕ ಮನೆ ಮನೆಗೆ ತೆರಳಿ ಗುರ್ಜಿ ಆಟವಾಡುತ್ತಾ ಭಿಕ್ಷೆ ಸಂಗ್ರಹಿಸಿದನು. ಗ್ರಾಮಸ್ಥರು ಗುರ್ಜಿ ಮೂರ್ತಿಗೆ ನೀರು ಎರಚಿ ಭಿಕ್ಷೆ ನೀಡಿದರು. ಸಂಗ್ರಹವಾದ ಭಿಕ್ಷೆಯಿಂದ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಇದಕ್ಕೂ ಮುನ್ನ ರಾಮಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಳೆದ ಒಂದೂವರೆ ತಿಂಗಳಿನಿಂದ ಸಮರ್ಪಕ ಮಳೆಯಾಗದ ಕಾರಣ ರೈತರು ಬಿತ್ತನೆ ಕಾರ್ಯ ಆರಂಭಿಸಿಲ್ಲ. ಕೆಲವರು ಮಳೆ ನಿರೀಕ್ಷೆಯಲ್ಲಿ ಹೆಸರು ಬಿತ್ತನೆ ಮಾಡಿದ್ದರೂ ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ಮಳೆಯಾಗಲಿ ಹಾಗೂ ರೈತರ ಸಂಕಷ್ಟ ದೂರವಾಗಲಿ ಎಂಬ ಉದ್ದೇಶದಿಂದ ವರುಣ ದೇವನ ಕೃಪೆಗಾಗಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ರೈತ ಸಮುದಾಯ ತಿಳಿಸಿತು.



