ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅಶ್ಲೀಲ ಹಾಗೂ ಅವಹೇಳನಕಾರಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ ಆರೋಪ ಎದುರಿಸುತ್ತಿರುವ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ.
ಪ್ರಶಾಂತ್ ತಲ್ವಾರ್, ಚಂದ್ರಶೇಖರ್ ಹಾಗೂ ನಿಂಗರಾಜ್ ಗುಲಾಪ್ಪ ತಲ್ವಾರ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಡೆವಿಲ್’ ಚಿತ್ರದ ಪ್ರಚಾರದ ಸಂದರ್ಭ ವಿಜಯಲಕ್ಷ್ಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ನಿಂದನಾತ್ಮಕ ಕಾಮೆಂಟ್‌ಗಳು ಹರಿದಾಡಿದ್ದವು. ಈ ಕುರಿತು ವಿಜಯಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.
ವಿಚಾರಣೆ ವೇಳೆ ನ್ಯಾಯಾಲಯ, ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಯಾರೊಬ್ಬರ ಮಾನಹಾನಿ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಸಂವಿಧಾನ ನೀಡಿರುವ ಹಕ್ಕುಗಳಿಗೆ ಕಾನೂನುಬದ್ಧ ಮಿತಿಗಳಿದ್ದು, ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಮತ್ತು ಪೋಸ್ಟ್‌ಗಳು ಗಂಭೀರ ಅಪರಾಧವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ತೀರ್ಪು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ನಡೆಯುವ ಆನ್‌ಲೈನ್ ದೌರ್ಜನ್ಯಗಳ ವಿರುದ್ಧ ಕಠಿಣ ಸಂದೇಶವಾಗಿ ಪರಿಗಣಿಸಲಾಗುತ್ತಿದೆ.



