ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೋದ ಪಿಂಕ್ ಲೈನ್ ಎಲಿವೇಟೆಡ್ ಮಾರ್ಗ ಶೀಘ್ರದಲ್ಲೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ಎಲ್ಲ ಅಗತ್ಯ ಅನುಮತಿಗಳು ದೊರೆತರೆ ಅಕ್ಟೋಬರ್ ಮಧ್ಯಭಾಗದಲ್ಲಿ ಈ ಮಾರ್ಗವನ್ನು ಉದ್ಘಾಟಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಪಿಂಕ್ ಲೈನ್ ಮಾರ್ಗದ ಸುರಕ್ಷತೆ ಮತ್ತು ಫಿಟ್ನೆಸ್ಗೆ ಸಂಬಂಧಿಸಿದಂತೆ ಸ್ವತಂತ್ರ ಏಜೆನ್ಸಿ ನಡೆಸಿದ ಪರಿಶೀಲನೆಯ ಬಳಿಕ ನೀಡಿರುವ ಐಎಸ್ಐ ಪ್ರಮಾಣಪತ್ರ ಇದೀಗ ಬಿಎಂಆರ್ಸಿಎಲ್ ಕೈ ಸೇರಿದೆ ಎನ್ನಲಾಗಿದೆ. ಪ್ರಮಾಣಪತ್ರ ದೊರೆತ ಹಿನ್ನೆಲೆಯಲ್ಲಿ ಅಗತ್ಯ ದಾಖಲೆಗಳನ್ನು ರೈಲ್ವೆ ಸುರಕ್ಷತಾ ಆಯುಕ್ತರ (CMRS) ಪರಿಶೀಲನೆಗೆ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ.
ಇದಾದ ಬಳಿಕ ಪಿಂಕ್ ಲೈನ್ನ ಅಂತಿಮ ಹಂತದ ಸುರಕ್ಷತಾ ತಪಾಸಣೆ ನಡೆಯಲಿದೆ. ಸುಮಾರು ಎರಡು ದಿನಗಳ ಕಾಲ ನಡೆಯಲಿರುವ ಈ ಪರಿಶೀಲನೆಗೆ ಬಿಎಂಆರ್ಸಿಎಲ್ ವತಿಯಿಂದ CMRS ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ.
ಅಕ್ಟೋಬರ್ ಆರಂಭದಲ್ಲಿ CMRS ಅಧಿಕಾರಿಗಳು ಪಿಂಕ್ ಲೈನ್ ಮಾರ್ಗವನ್ನು ಪರಿಶೀಲಿಸುವ ಸಾಧ್ಯತೆ ಇದೆ. ಸುರಕ್ಷತಾ ಪರಿಶೀಲನೆ ಪೂರ್ಣಗೊಂಡ ಬಳಿಕ ರೈಲ್ವೆ ಮಂಡಳಿಯಿಂದ ಒಂದು ವಾರದೊಳಗೆ ಸಂಚಾರಕ್ಕೆ ಅನುಮತಿ ದೊರೆಯುವ ನಿರೀಕ್ಷೆ ಇದೆ.
ಎಲ್ಲ ಅಗತ್ಯ ಅನುಮತಿಗಳು ದೊರೆತರೆ ಅಕ್ಟೋಬರ್ ಮಧ್ಯಭಾಗದಲ್ಲಿ ಪಿಂಕ್ ಲೈನ್ ಎಲಿವೇಟೆಡ್ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ವೇದಿಕೆ ಸಿದ್ಧವಾಗಲಿದೆ.
ಆರಂಭಿಕ ಹಂತದಲ್ಲಿ ಪಿಂಕ್ ಲೈನ್ನಲ್ಲಿ ಒಟ್ಟು 6 ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಪೀಕ್ ಅವರ್ನಲ್ಲಿ ಪ್ರತಿ 6 ನಿಮಿಷಕ್ಕೊಂದು ರೈಲು, ಸಾಮಾನ್ಯ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸುವ ನಿರೀಕ್ಷೆ ಇದೆ.
ಪಿಂಕ್ ಲೈನ್ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ಬಳಿಕ ಬೆಂಗಳೂರಿನ ಮೆಟ್ರೋ ಸಂಪರ್ಕ ಜಾಲ ಮತ್ತಷ್ಟು ವಿಸ್ತರಣೆಯಾಗಲಿದ್ದು, ನಗರದ ವಿವಿಧ ಭಾಗಗಳ ನಡುವೆ ಸಾರ್ವಜನಿಕ ಸಾರಿಗೆ ಸಂಪರ್ಕಕ್ಕೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.



