ಚೆನ್ನೈ: ತಮಿಳುನಾಡಿನ ಸರ್ಕಾರಿ ವಸತಿನಿಲಯಗಳ ಆಹಾರ ಮೆನುವಿನಲ್ಲಿ ಚಿಕನ್ ಮತ್ತು ಮಟನ್ ಜೊತೆಗೆ ಗೋಮಾಂಸವನ್ನೂ ಸೇರಿಸಬೇಕು ಎಂದು ಕೆಲ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ತಮಿಳುನಾಡು ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿಗಳ ಮನವಿಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಚೆನ್ನೈನ ಸೈದಾಪೇಟೆಯಲ್ಲಿರುವ ಎಂ.ಸಿ. ರಾಜಾ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಚಿವ ವನ್ನಿ ಅರಸು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಹಾಸ್ಟೆಲ್‌ನಲ್ಲಿರುವ ಕೆಲ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು, ಪ್ರಸ್ತುತ ನೀಡಲಾಗುತ್ತಿರುವ ಮಾಂಸಾಹಾರಿ ಆಹಾರ ಮೆನುವಿನಲ್ಲಿ ಗೋಮಾಂಸವನ್ನೂ ಸೇರಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದಾರೆ.
ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಈಗಾಗಲೇ ಮಟನ್ ಮತ್ತು ಚಿಕನ್ ನೀಡಲಾಗುತ್ತಿದ್ದು, ಪ್ರತಿ ಸೋಮವಾರ ಬಿರಿಯಾನಿ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದಿದ್ದಾರೆ. ಮಟನ್ ದುಬಾರಿಯಾಗಿರುವುದರಿಂದ ಹಾಗೂ ತಮ್ಮ ಮನೆಗಳಲ್ಲಿ ನಿಯಮಿತವಾಗಿ ಮಾಂಸ ಸೇವಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಗೋಮಾಂಸವನ್ನು ಮೆನುವಿನಲ್ಲಿ ಸೇರಿಸಬೇಕು ಎಂದು ಕೆಲ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವ ವನ್ನಿ ಅರಸು, ಈ ಕುರಿತು ಸರ್ಕಾರ ತಕ್ಷಣ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೊದಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.



