ರಾಮನಗರ: ಕನಕಪುರದ ಐತಿಹಾಸಿಕ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಸಾವಿರಾರು ಭಕ್ತರು, ವಿವಿಧ ಮಠಾಧೀಶರು, ಗಣ್ಯರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದು ಭಾವಪೂರ್ಣ ನಮನ ಸಲ್ಲಿಸಿದರು.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಶ್ರೀಗಳ ಪಾದಗಳಿಗೆ ನಮಸ್ಕರಿಸಿ ಅಂತಿಮ ವಿದಾಯ ಹೇಳಿದರು. ಈ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ದೇಗುಲ ಮಠಕ್ಕೆ ಭೇಟಿ ನೀಡಿ ಶ್ರೀಗಳ ಅಂತಿಮ ದರ್ಶನ ಪಡೆದರು.
ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಠಕ್ಕೆ ಆಗಮಿಸಿ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ರವಿ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಅಂತಿಮ ದರ್ಶನದ ವೇಳೆ ಶ್ರೀಗಳೊಂದಿಗಿನ ಆತ್ಮೀಯ ಒಡನಾಟವನ್ನು ಸ್ಮರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದರು. ಬಳಿಕ ಶ್ರೀಗಳ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜ ಹೊದಿಸಿ, ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಸರ್ಕಾರಿ ಗೌರವದ ಅಂಗವಾಗಿ ತ್ರಿವರ್ಣ ಧ್ವಜವನ್ನು ಕಿರಿಯ ಶ್ರೀಗಳಿಗೆ ಹಸ್ತಾಂತರಿಸುವ ವೇಳೆ ಮುಖ್ಯಮಂತ್ರಿ ಗದ್ಗದಿತರಾದರು. ಶ್ರೀಗಳಿಗೆ ಕಣ್ಣೀರಿನ ವಿದಾಯ ಹೇಳಿದ ಬಳಿಕ ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಈಶ್ವರ್ ಖಂಡ್ರೆ ಮಠದ ಆವರಣದಲ್ಲೇ ಕೆಲಕಾಲ ಕುಳಿತು ಶ್ರೀಗಳ ಸೇವೆ ಮತ್ತು ಕೊಡುಗೆಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು.



