ಬೆಂಗಳೂರು: ಬಿಡದಿ ಟೌನ್‌ಶಿಪ್ ಎಐ ಸಿಟಿ ಯೋಜನೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವೆ ನಡೆಯುತ್ತಿರುವ ಪತ್ರ ಸಮರದ ನಡುವೆ, ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯೋಜನೆ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಬಿಡದಿಗೆ ಹೋಗುವ ಅಗತ್ಯವೇ ಇಲ್ಲ. ಮುಖ್ಯಮಂತ್ರಿ ವಿಧಾನಸೌಧಕ್ಕೆ ಆಹ್ವಾನ ನೀಡಿದ್ದಾರೆ. ಕುಮಾರಸ್ವಾಮಿ ಅಲ್ಲಿಗೆ ಬಂದು ಚರ್ಚೆ ನಡೆಸಲಿ. ಇಂತಹ ನಾಟಕಗಳನ್ನು ಅವರು ಬಿಡಬೇಕು ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ಯೋಜನೆಯ ಮೂಲ ಕಲ್ಪನೆಯೇ ಹೆಚ್.ಡಿ. ಕುಮಾರಸ್ವಾಮಿ ಅವರದ್ದಾಗಿದೆ. ಅವರು ಮತ್ತು ಅವರ ತಂದೆ ಅಧಿಕಾರದಲ್ಲಿದ್ದಾಗ ಯೋಜನೆಯನ್ನು ರದ್ದುಪಡಿಸಲಿಲ್ಲ. ಈಗ ವಿರೋಧ ವ್ಯಕ್ತಪಡಿಸುವುದು ಕೇವಲ ರಾಜಕೀಯ ನಾಟಕ ಎಂದು ಬಾಲಕೃಷ್ಣ ಆರೋಪಿಸಿದರು.
ಮುಖ್ಯಮಂತ್ರಿ ಈಗಾಗಲೇ ಯೋಜನೆ ಕುರಿತು ನಿರ್ಧಾರ ಕೈಗೊಂಡಿದ್ದು, ಅದನ್ನು ಜಾರಿಗೊಳಿಸುವುದು ಖಚಿತ. ಯಾರೇ ಎಷ್ಟೇ ಹೋರಾಟ ಮಾಡಿದರೂ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಸವಾಲು ಹಾಕಿದರು.
ರೈತರ ಸಮ್ಮುಖದಲ್ಲೇ ಚರ್ಚೆ ನಡೆಯಲಿ ಎಂಬ ಕುಮಾರಸ್ವಾಮಿ ಪತ್ರದ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಚರ್ಚೆಗೆ ಕರೆದಿದ್ದಾರೆ. ಅವರು ವಿಧಾನಸೌಧಕ್ಕೆ ಬರಲಿ. ಬರಲು ಇಷ್ಟವಿದ್ದರೆ ಬರಲಿ, ಇಲ್ಲದಿದ್ದರೆ ಬಿಡಲಿ ಎಂದು ತಿರುಗೇಟು ನೀಡಿದರು.
ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ನಿಜವಾದ ರೈತರಲ್ಲ, ಹೊರಗಿನಿಂದ ಬಂದವರೇ ಹೆಚ್ಚಾಗಿದ್ದರು ಎಂದು ಆರೋಪಿಸಿದರು. ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಎಐ ಸಿಟಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕುಮಾರಸ್ವಾಮಿ ನೀಡಿದ್ದಕ್ಕಿಂತ ಹೆಚ್ಚಿನ ಪರಿಹಾರವನ್ನು ಸರ್ಕಾರ ರೈತರಿಗೆ ನೀಡುತ್ತಿದೆ ಎಂದು ಬಾಲಕೃಷ್ಣ ಹೇಳಿದರು.
ಕೆರೆಗಳ ಶುದ್ಧೀಕರಣಕ್ಕಾಗಿ ಸರ್ಕಾರ ಹಣ ಮೀಸಲಿಟ್ಟಿದ್ದು, ರೈತರಿಗೆ ಪ್ರತಿದಿನ ಆರ್‌ಟಿಜಿಎಸ್ ಮೂಲಕ ಪರಿಹಾರ ಧನ ಪಾವತಿಸಲಾಗುತ್ತಿದೆ. ಸಾಲ ಪಡೆದ ರೈತರಿಗೆ ಒನ್‌ಟೈಮ್ ಸೆಟಲ್‌ಮೆಂಟ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂದು ವಿವರಿಸಿದರು.



