ದಾವಣಗೆರೆ: ಸಾಮಾನ್ಯ ಕಾರ್ಮಿಕನ ಸೋಗಿನಲ್ಲಿ ಹರಿಹರದಲ್ಲಿ ಅಡಗಿದ್ದ ಉತ್ತರ ಪ್ರದೇಶ ಮೂಲದ ಯುವಕನ ಬಂಧನವು ಭದ್ರತಾ ಸಂಸ್ಥೆಗಳನ್ನು ಎಚ್ಚರಗೊಳಿಸಿದೆ. ಸುಹೇಲ್ ಎಂಬ 20 ವರ್ಷದ ಶಂಕಿತನ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ಅಂಶಗಳು ಬೆಳಕಿಗೆ ಬಂದಿವೆ.
ಹರಿಹರ ಸಮೀಪದ ಕೈಗಾರಿಕಾ ವಲಯದ ಫ್ಯಾಕ್ಟರಿಯೊಂದರಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ತನ್ನ ನಿಜವಾದ ಚಟುವಟಿಕೆಗಳನ್ನು ಮುಚ್ಚಿಟ್ಟಿದ್ದಾನೆ ಎಂಬ ಅನುಮಾನಗಳ ನಡುವೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರವನ್ನು ಗುರಿಯಾಗಿಸಿಕೊಂಡಿದ್ದ ವಿಚಾರ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಆರೋಪಿಯ ಮೊಬೈಲ್ ಫೋನ್‌ನಲ್ಲಿರುವ ಮಾಹಿತಿ ಪರಿಶೀಲಿಸಿದಾಗ ಪಾಕಿಸ್ತಾನ ಮೂಲದ ಸಂಪರ್ಕ ಸಂಖ್ಯೆಗಳು, ಅನುಮಾನಾಸ್ಪದ ಆನ್‌ಲೈನ್ ಜಾಲಗಳ ಸಂಪರ್ಕ ಮತ್ತು ದೇಶವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳು ಪತ್ತೆಯಾಗಿವೆ. ‘MEMON & JUTTU-333’ ಹಾಗೂ ‘RANABHAI-333’ ಹೆಸರಿನ ಗುಂಪುಗಳೊಂದಿಗೆ ಈತನ ಸಂಪರ್ಕವಿದ್ದ ಬಗ್ಗೆ ತನಿಖೆಯಲ್ಲಿ ಉಲ್ಲೇಖವಾಗಿದೆ.
ಇದಲ್ಲದೆ, ಆಯುಧಗಳನ್ನು ಹಿಡಿದು ತೆಗೆಸಿಕೊಂಡಿದ್ದ ಹಲವು ಚಿತ್ರಗಳು, ಸಂದೇಶಗಳು ಮತ್ತು ಸಂವಹನ ದಾಖಲೆಗಳು ತನಿಖಾ ಸಂಸ್ಥೆಗಳ ಕೈ ಸೇರಿವೆ. ಪ್ರಾಥಮಿಕ ಮಾಹಿತಿ ಪ್ರಕಾರ, ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಜಾಲದ ಭಾಗವಾಗಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಉಗ್ರ ಸಂಘಟನೆಗಳು, ವಿದೇಶಿ ಸಂಪರ್ಕಗಳು ಮತ್ತು ಸ್ಥಳೀಯ ನೆರವು ಜಾಲದ ಕುರಿತು ತನಿಖೆ ಮುಂದುವರಿದಿದೆ.



