HomeGadag Newsಗುರುಕುಲ ಮಕ್ಕಳ ದಾಸೋಹಕ್ಕೆ ದಾನಿಯ ಮಹಾದಾಸೋಹ

ಗುರುಕುಲ ಮಕ್ಕಳ ದಾಸೋಹಕ್ಕೆ ದಾನಿಯ ಮಹಾದಾಸೋಹ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಠ-ಮಾನ್ಯಗಳು ಹಾಗೂ ಗುರುಕುಲಗಳು ನಡೆಸುವ ಅನ್ನ, ಅಕ್ಷರ ಮತ್ತು ಆಶ್ರಯದ ತ್ರಿವಿಧ ದಾಸೋಹ ಸೇವೆ ನಿರಂತರವಾಗಿ ಸಾಗಲು ದಾನಿಗಳ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಹೂವಿನಶಿಗ್ಲಿ ಮಠದ ಗುರುಕುಲದ ಮಕ್ಕಳ ನಿತ್ಯದ ದಾಸೋಹಕ್ಕಾಗಿ ಪ್ರತಿ ಆರು ತಿಂಗಳಿಗೊಮ್ಮೆ ದಿನಸಿ ಪದಾರ್ಥಗಳನ್ನು ಪೂರೈಸುತ್ತಿರುವ ಕಲಬುರಗಿ ಜಿಲ್ಲೆಯ ಸೋನಾಳ ಗ್ರಾಮದ ಉದ್ಯಮಿ ವಿಜಯಕುಮಾರ ಸೂರ್ಯಕಾಂತ ಬಿರಾದಾರ ಅವರಿಗೆ ಗುರುಕುಲ ಹಾಗೂ ಗ್ರಾಮಸ್ಥರ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸರ್ಕಾರದ ಯಾವುದೇ ಅನುದಾನವಿಲ್ಲದೆ ಗುರುಕುಲದ ನೂರಾರು ಮಕ್ಕಳಿಗೆ ತ್ರಿವಿಧ ದಾಸೋಹ ಸೇವೆ ನೀಡುವುದು ಸವಾಲಿನ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ವಿಜಯಕುಮಾರ ಬಿರಾದಾರ ಅವರಂತಹ ದಾನಿಗಳ ಸಹಕಾರದಿಂದಲೇ ಸೇವಾ ಪರಂಪರೆ ನಿರಂತರವಾಗಿ ಸಾಗುತ್ತಿದೆ ಎಂದು ಹೇಳಿದರು.

ಸಮಾಜದಲ್ಲಿ ದಾನಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹಲವು ವರ್ಷಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡುತ್ತಿರುವ ವಿಜಯಕುಮಾರ ಬಿರಾದಾರ ಅವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಭಗವಂತ ಅವರಿಗೆ ಇನ್ನಷ್ಟು ಶಕ್ತಿ, ಸಂಪತ್ತು ಮತ್ತು ಸೇವಾ ಮನೋಭಾವವನ್ನು ಕರುಣಿಸಲಿ ಎಂದು ಹಾರೈಸಿದರು.

ತಹಸೀಲ್ದಾರ್ ರವಿ ಕೊರಕನವರ ಮಾತನಾಡಿ, ಗುರುಕುಲ ಶಿಕ್ಷಣ ಪದ್ಧತಿ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಹೂವಿನಶಿಗ್ಲಿ ಮಠವು ಅನಾಥ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಮಹತ್ವದ ಕಾರ್ಯ ಮಾಡುತ್ತಿದೆ. ಈ ಸೇವೆಗೆ ವಿಜಯಕುಮಾರ ಬಿರಾದಾರ ಅವರು ಹಲವು ವರ್ಷಗಳಿಂದ ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ ಎಂದರು.

ಗುರುಕುಲದ ಆಡಳಿತಾಧಿಕಾರಿ ಆರ್.ಜಿ. ಚಿಕ್ಕಮಠ ಮಾತನಾಡಿ, ಭಕ್ತರು ಹಾಗೂ ದಾನಿಗಳ ಸಹಕಾರದಿಂದಲೇ ಮಠದಲ್ಲಿ ಅನಾಥ ಮತ್ತು ಬಡ ಮಕ್ಕಳ ಸೇವೆ ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯಕುಮಾರ ಎಸ್. ಬಿರಾದಾರ, ಮಕ್ಕಳ ಸೇವೆಯೇ ದೇವರ ಸೇವೆ ಎಂಬ ನಂಬಿಕೆಯಿಂದ ಈ ಕಾರ್ಯದಲ್ಲಿ ತೊಡಗಿದ್ದೇನೆ. ಗುರುಕುಲದ ಸೇವೆಯಲ್ಲಿ ಭಾಗಿಯಾಗಿರುವುದು ಆತ್ಮಸಂತೃಪ್ತಿ ತಂದಿದ್ದು, ಮುಂದೆಯೂ ಈ ಸೇವೆ ಮುಂದುವರಿಯಲಿ ಎಂಬುದು ನನ್ನ ಆಶಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುಭಾಷ್ ಮಜ್ಜಗಿ, ರಾಜು ಚಂದರವಾಡ, ಧನರಾಜ ರಾಜಮನೆ, ಎಸ್.ಎಸ್. ಮೈನಾಲೆ, ಬಿ.ಬಿ. ಹೆಡೆ, ಮಹಾದೇವ ಬಿರಾದಾರ, ಮನೋಜ ಹಿರೇಮಠ, ಆಕಾಶ ಹೊನ್ನಿ, ಆರ್.ಬಿ. ಬನ್ನೂರ, ಚಂದ್ರಕಾಂತ ಘಾಟಗೆ, ಶೈಲಾ ಆದಿ, ಜಯಶ್ರೀ ಮೆಳ್ಳಿಗೇರಿ, ಯೋಗೇಂದ್ರ ಜಂಬಗಿ, ಗುರುಕುಲದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಆರ್.ವಿ. ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.

“ದಾನಿಗಳ ಸಹಕಾರದಿಂದಲೇ ಗುರುಕುಲಗಳ ತ್ರಿವಿಧ ದಾಸೋಹ ಸೇವೆ ನಿರಂತರವಾಗಿ ಸಾಗುತ್ತಿದೆ.”

— ಶ್ರೀ ಚನ್ನವೀರ ಮಹಾಸ್ವಾಮಿಗಳು, ಹೂವಿನಶಿಗ್ಲಿ ವಿರಕ್ತಮಠ


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!