ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸುವವರ ವಿರುದ್ಧ ಮೇ ತಿಂಗಳಿನಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದು, ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು 8.94 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿ ಜಾಗೃತ ದಳದ ಸಿಬ್ಬಂದಿ ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿ ಸಂಚರಿಸುವ ಬಸ್‌ಗಳಲ್ಲಿ ದಿಢೀರ್ ತಪಾಸಣೆ ನಡೆಸಿದ್ದರು. ಈ ವೇಳೆ ಒಟ್ಟು 42,518 ಬಸ್‌ಗಳನ್ನು ಪರಿಶೀಲನೆ ನಡೆಸಲಾಗಿದ್ದು, 4,353 ಪ್ರಕರಣಗಳು ಪತ್ತೆಯಾಗಿವೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ 4,476 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ.
ಈ ಕಾರ್ಯಾಚರಣೆಯಿಂದ ಸುಮಾರು 1.52 ಲಕ್ಷ ರೂಪಾಯಿ ಮೌಲ್ಯದ ಆದಾಯ ಸೋರಿಕೆ ತಡೆಗಟ್ಟಲಾಗಿದ್ದು, ದಂಡದ ರೂಪದಲ್ಲಿ ಒಟ್ಟು 8.94 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.
ಇದರೊಂದಿಗೆ, ಟಿಕೆಟ್ ವಿತರಣೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಯ ವಿರುದ್ಧವೂ ಸಂಸ್ಥೆ ಶಿಸ್ತು ಕ್ರಮ ಕೈಗೊಂಡಿದೆ. ಅಕ್ರಮಗಳಿಗೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಇಲಾಖಾ ಮಟ್ಟದಲ್ಲಿ ಅಗತ್ಯ ಕ್ರಮ ಜರುಗಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಮುಂದಿನ ದಿನಗಳಲ್ಲಿಯೂ ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧ ವಿಶೇಷ ತಪಾಸಣೆ ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಎಚ್ಚರಿಕೆ ನೀಡಿದೆ.
ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಟಿಕೆಟ್ ಅಥವಾ ಮಾನ್ಯ ಪಾಸ್‌ಗಳನ್ನು ಪಡೆದು, ಸಂಸ್ಥೆಯೊಂದಿಗೆ ಸಹಕರಿಸುವಂತೆ ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.



