ಬೆಂಗಳೂರು: ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ ಹಾಗೂ ಹಣ್ಣುಗಳ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ.
ಹವಾಮಾನ ವೈಪರೀತ್ಯ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ತರಕಾರಿಗಳ ಇಳುವರಿ ಕಡಿಮೆಯಾಗಿರುವುದೇ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಕೊರತೆ ಮುಂದುವರಿದರೆ ಇನ್ನಷ್ಟು ಬೆಲೆ ಏರಿಕೆಯ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ.
ಹಾಪ್‌ಕಾಮ್ಸ್ ಮಾರುಕಟ್ಟೆ ದರಗಳ ಪ್ರಕಾರ ಹಲವಾರು ತರಕಾರಿಗಳ ಬೆಲೆ ಕೆಜಿಗೆ 90ರಿಂದ 200 ರೂಪಾಯಿವರೆಗೂ ಏರಿಕೆಯಾಗಿದೆ. ಬೆಳ್ಳುಳ್ಳಿ ದರ ₹270, ಬಟಾಣಿ ಕಾಳು ₹200, ಡಬಲ್ ಬೀನ್ಸ್ ₹160, ಮೆಂತ್ಯೆ ಸೊಪ್ಪು ಕಟ್ಟಿಗೆ ₹30 ಸೇರಿದಂತೆ ಹಲವು ತರಕಾರಿಗಳು ಸಾಮಾನ್ಯ ಜನರಿಗೆ ಭಾರೀ ಹೊರೆ ಆಗಿವೆ.
ಹಣ್ಣುಗಳ ದರದಲ್ಲೂ ಏರಿಕೆ ಕಂಡುಬಂದಿದ್ದು, ಸೇಬು ₹325, ಗಾಲ ಸೇಬು ₹350, ಕಿವಿ ಫ್ರೂಟ್ ₹800ರಿಂದ ₹1000, ಲಿಚ್ಚಿ ₹500, ಮೂಸಂಬಿ ₹160, ಸಪೋಟ ₹190 ರೂಪಾಯಿವರೆಗೆ ಮಾರಾಟವಾಗುತ್ತಿದೆ.
ಬೆಲೆ ಏರಿಕೆಯ ಪರಿಣಾಮವಾಗಿ ಮಧ್ಯಮ ವರ್ಗ ಹಾಗೂ ಸಾಮಾನ್ಯ ಕುಟುಂಬಗಳ ಖರ್ಚು ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಖರೀದಿ ಮೇಲೂ ಪ್ರಭಾವ ಬೀರುತ್ತಿದೆ.
ವ್ಯಾಪಾರಿಗಳು ಮಳೆ ಉತ್ತಮವಾಗಿ ಸುರಿದರೆ ಮುಂದಿನ ವಾರಗಳಲ್ಲಿ ದರಗಳು ಸ್ಥಿರವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.



