HomeKarnataka Newsಸಂಭ್ರಮದ ಕೆಂಪೇಗೌಡ ಜಯಂತಿ; ನಾಡಪ್ರಭುವಿಗೆ ವಂದಿಸಿದ ಸಿಎಂ ಡಿ.ಕೆ. ಶಿವಕುಮಾರ್

ಸಂಭ್ರಮದ ಕೆಂಪೇಗೌಡ ಜಯಂತಿ; ನಾಡಪ್ರಭುವಿಗೆ ವಂದಿಸಿದ ಸಿಎಂ ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

ಬೆಂಗಳೂರು: ಬೆಂಗಳೂರು ನಿರ್ಮಾತೃ, ಸರ್ವ ಜನಾಂಗದ ನಾಯಕ, ಬೆಂದಕಾಳೂರು ಕಟ್ಟಿದ ದೂರದೃಷ್ಟಿಯ ನಾಯಕ, ಕೆರೆಗಳನ್ನು ನಿರ್ಮಿಸಿದ ಮಣ್ಣಿನ ಮಗ, ಕೋಟೆ ಕೊತ್ತಲಗಳನ್ನು ಕಟ್ಟಿದ ಕಲಿ ವೀರ ಕೆಂಪೇಗೌಡರ 517 ನೇ ಜಯಂತಿಯನ್ನು ಸಿಎಂ‌ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ‌ಅತ್ಯಂತ ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಆಚರಿಸಲಾಯಿತು.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಬೃಹತ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ಅವರು 517 ನೇ ಕೆಂಪೇಗೌಡ ಜಯಂತಿಗೆ ಚಾಲನೆ ನೀಡಿದರು.

ಪ್ರತಿಮೆಯ ಪಾದಗಳಿಗೆ ಸಾಂಕೇತಿಕವಾಗಿ ಡಿ.ಕೆ.ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡಿದರು. ಆದಿಚುಂಚನಗಿರಿಯ ಸ್ವಾಮೀಜಿಗಳಾದ ನಿರ್ಮಲಾನಂದನಾಥ ಸ್ವಾಮೀಜಿಯವರು ಹಾಗೂ ಸಿರಾ ತಾಲ್ಲೂಕಿನ ಸ್ಪಟಿಕಪುರಿಯ ನಂಜಾವಧೂತ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಸಂಸ್ಥಾನದ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಈ ವೇಳೆ ಜೊತೆಯಾದರು. ನಂತರ ಪ್ರತಿಮೆಯ ಪಕ್ಕದಲ್ಲಿ ನಿರ್ಮಾಣ‌ ಮಾಡಿರುವ ಥೀಮ್ ಪಾರ್ಕ್ ಅನ್ನು ವೀಕ್ಷಿಸಿದರು. ನಂತರ ಶಿವಕುಮಾರ್ ಅವರು ಮಾತನಾಡಿದರು.

“ನಾಡಿನ ಸಮಸ್ತ ಜನರಿಗೆ ಕೆಂಪೇಗೌಡ ಜಯಂತಿ ಶುಭಾಶಯಗಳು. ದೂರದೃಷ್ಟಿಯ ಮಹಾಚೇತನ ಕೆಂಪೇಗೌಡರನ್ನು ಸ್ಮರಿಸುವ ಭಾಗ್ಯ ನಮ್ಮೆಲ್ಲರಿಗೂ ಲಭಿಸಿದೆ. ಕೆಂಪೇಗೌಡರ, ಚಿಂತನೆ, ಆಚಾರ, ವಿಚಾರ ಎಲ್ಲವನ್ನು ಗಮನಲ್ಲಿಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮ್ಯಾರಥಾನ್ ಓಟ, ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡುವ ಕಾರ್ಯಕ್ರಮ, ಮಾಗಡಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ ಕೋಟೆ ಸಮಗ್ರ ಅಭಿವೃದ್ಧಿ ಕಾರ್ಯ ಹಮ್ಮಿಕೊಂಡಿದ್ದೇವೆ. ಮಾಗಡಿಯಲ್ಲಿರುವ ಕೆಂಪೇಗೌಡರ ಸಮಾಧಿ ಬಳಿ 10 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಐದೂವರೆ ಎಕರೆ ಖರೀದಿ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

ಕೆಂಪೇಗೌಡರ ಇತಿಹಾಸ ಪರಿಚಯಕ್ಕೆ ಕಾರ್ಯಯೋಜನೆ ರೂಪಿಸಲು ಸೂಚನೆ:

“ಬೆಂಗಳೂರಿಗೆ ಬರುವವರಿಗೆ ಕೆಂಪೇಗೌಡರ ಗುರುತು ಪರಿಚಯಿಸಲು, ಟ್ರಂಪೆಟ್ ವೃತ್ತದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದವರಿಗೆ ಸೂಚನೆ ನೀಡಿದ್ದೇವೆ. ಅವರು ಸಧ್ಯದಲ್ಲೇ ಕಾರ್ಯಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಆ ಮೂಲಕ ಬೆಂಗಳೂರಿಗೆ ಬರುವವರು ಕೆಂಪೇಗೌಡರನ್ನು ಸ್ಮರಿಸುವಂತೆ ಮಾಡಲಾಗುವುದು” ಎಂದು ತಿಳಿಸಿದರು.

“ಕಳೆದ ವರ್ಷ ಸುಮ್ಮನಹಳ್ಳಿ ಬಳಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ಐದು ಎಕರೆ ಜಾಗವನ್ನು ನೀಡಿ ಭೂಮಿ ಪೂಜೆ ಮಾಡಿದ್ದೆವು. ಜೊತೆಗೆ ಅಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಟೌನ್ ಪ್ಲಾನಿಂಗ್ ಕಾಲೇಜು ಮಾಡಲು ಮಾರ್ಗದರ್ಶನ ನೀಡಲಾಗಿದೆ.

ಹಿಂದಿನ ಸರ್ಕಾರ ಈ ಪ್ರತಿಮೆಯನ್ನು ಚೆನ್ನಾಗಿ ಕಟ್ಟಿದೆ. ಆದರೆ ವಿಮಾನ ನಿಲ್ದಾಣಕ್ಕೆ ಬರುವವರಿಗೆ ಈ ಪ್ರತಿಮೆ ಕಾಣುತ್ತಿಲ್ಲ. ಇದರ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ನಾನು, ಸ್ವಾಮೀಜಿಗಳು ಹಾಗೂ ಕೃಷ್ಣ ಬೈರೇಗೌಡರೊಂದಿಗೆ ಚರ್ಚೆ ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರವರಿಗೆ ನಿರ್ದೇಶನ ನೀಡಲಾಗಿದೆ” ಎಂದು ತಿಳಿಸಿದರು.

“108 ಅಡಿಯ ಈ ಕಂಚಿನ ಪ್ರತಿಮೆ ಬಳಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಹಸಿರು ರೂಪಿಸಲಾಗಿದೆ. ಇಲ್ಲಿನ ಕಾಮಗಾರಿ ಮುಗಿದ ಬಳಿಕ ಇದನ್ನು ಉದ್ಘಾಟನೆ ಮಾಡುತ್ತೇವೆ. ಈ ಥೀಮ್ ಪಾರ್ಕ್ ಅನ್ನು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಣೆ ಮಾಡಲು ಸೂಚಿಸಿದ್ದೇನೆ. ಇದಕ್ಕೆ ಪ್ರಾಧಿಕಾರವೂ ಒಪ್ಪಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ಪ್ರತಿ ವರ್ಷ ಒಂದೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕ್ರಮ

“ಇನ್ನು ಮುಂದೆ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಕೇವಲ ವಿಧಾನಸೌಧ ಹೊರತಾಗಿ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಮಾಡಲು ತೀರ್ಮಾನಿಸಿದ್ದೇವೆ. ಇಂದು ಯಶವಂತಪುರದಲ್ಲಿ ಈ ಕಾರ್ಯಕ್ರಮ ಮಾಡುತ್ತಿದ್ದು, ಮುಂದಿನ ವರ್ಷ ಶಾಸಕರೊಂದಿಗೆ ಚರ್ಚಿಸಿ ಬ್ಯಾಟರಾಯನಪುರ, ಯಲಹಂಕ, ಕೆ.ಆರ್ ಪುರ ಅಥವಾ ಬೇರೆ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.

ಅದರೊಂದಿಗೆ ಮುಂದಿನ 28 ವರ್ಷಗಳ ಕಾಲ ಒಂದೊಂದು ಕ್ಷೇತ್ರದಲ್ಲಿ ಆಚರಣೆ ಮಾಡಲಾಗುವುದು. ಇನ್ನು ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ವಾರ್ಡ್ ಮಟ್ಟದಲ್ಲಿ ಈ ಕಾರ್ಯಕ್ರಮ ಆಚರಣೆಗೆ ಜಿಬಿಎ ವತಿಯಿಂದ ಆದೇಶ ಮಾಡಲಾಗಿದೆ. ಕೆಂಪೇಗೌಡರ ಆಚಾರ ವಿಚಾರ ಅಳವಡಿಸಿಕೊಂಡು ಬೆಂಗಳೂರಿನ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಬೆಂಗಳೂರಿಗೆ ಹೊಸ ರೂಪ ನೀಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

ಕೆಂಪೇಗೌಡರು ಎಲ್ಲಾ ವರ್ಗದ ಆಸ್ತಿ

“ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, 1.30 ಕೋಟಿ ವಾಹನಗಳ ಸಂಖ್ಯೆ ಇವೆ. ನಾವು ಎಷ್ಟೇ ಮೆಟ್ರೋ, ಸಾರ್ವಜನಿಕ ಸಾರಿಗೆ ತಂದರೂ ಒಬ್ಬರು ಒಂದೊಂದು ವಾಹನ ಇಟ್ಟುಕೊಂಡಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಸಾಧಿಸಲು ಮುಂದಾಗಿದ್ದೇವೆ.

ನಮ್ಮ ಮುಂದಿನ 2 ವರ್ಷಗಳ ಅವಧಿಯಲ್ಲಿ 500 ಕಿ.ಮೀ ಉದ್ದದ ಮೆಟ್ರೋ ವಿಸ್ತರಣೆಗೆ ಆಲೋಚನೆ ಮಾಡಿದ್ದು, ಕೃಷ್ಣ ಬೈರೇಗೌಡರು ಈ ಬಗ್ಗೆ ಚಿಂತನೆ ಮಾಡಲಿದ್ದಾರೆ. ಈ ಕಾರ್ಯಕ್ರಮ ಒಂದು ಜಾತಿಗೆ ಸೀಮಿತವಲ್ಲ. ಇದು ಕೆಂಪೇಗೌಡರ ದೂರದೃಷ್ಟಿ, ಆಚಾರ, ವಿಚಾರಗಳ, ನೀತಿಯನ್ನು ಬಳಸಿಕೊಳ್ಳುವ ಕಾರ್ಯಕ್ರಮವಾಗಿದೆ. ಕೆಂಪೇಗೌಡರು ಎಲ್ಲಾ ವರ್ಗದ ಆಸ್ತಿಯಾಗಿದ್ದಾರೆ” ಎಂದು ತಿಳಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img