HomeKarnataka Newsಸಮ್ಮತಿಯ ಲೈಂಗಿಕ ಸಂಬಂಧ ಪ್ರಕರಣದಲ್ಲಿ 19 ವರ್ಷದ ಯುವಕನ ಬಂಧನಕ್ಕೆ ಹೈಕೋರ್ಟ್ ಅಸಮಾಧಾನ; ಬಿಡುಗಡೆಗೆ ಆದೇಶ

ಸಮ್ಮತಿಯ ಲೈಂಗಿಕ ಸಂಬಂಧ ಪ್ರಕರಣದಲ್ಲಿ 19 ವರ್ಷದ ಯುವಕನ ಬಂಧನಕ್ಕೆ ಹೈಕೋರ್ಟ್ ಅಸಮಾಧಾನ; ಬಿಡುಗಡೆಗೆ ಆದೇಶ

For Dai;y Updates Join Our whatsapp Group

ಬೆಂಗಳೂರು: ಇಬ್ಬರು ವಯಸ್ಕರ ನಡುವಿನ ಪರಸ್ಪರ ಸಮ್ಮತಿಯ ಪ್ರೀತಿಯ ಸಂಬಂಧವನ್ನು ಸಮಾಜ ಅಥವಾ ಕುಟುಂಬ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಅದನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಮ್ಮತಿಯ ಪ್ರೀತಿಯ ಸಂಬಂಧವನ್ನು ಅಪರಾಧೀಕರಣಗೊಳಿಸಲು ಕ್ರಿಮಿನಲ್ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಮದುವೆ ಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪದಲ್ಲಿ ಜೈಲು ಸೇರಿದ್ದ 19 ವರ್ಷದ ಯುವಕನನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಬೆಂಗಳೂರು ನಿವಾಸಿ ಎಂ. ಧನುಷ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮುಂದಿನ ಎಲ್ಲ ನ್ಯಾಯಿಕ ಪ್ರಕ್ರಿಯೆಗಳಿಗೆ ತಡೆ ನೀಡಿದೆ.

ವಿಚಾರಣೆ ವೇಳೆ ದೂರುದಾರಳಾದ ಯುವತಿ ಸ್ವತಃ ನ್ಯಾಯಾಲಯದ ಮುಂದೆ ಹಾಜರಾಗಿ, ತಮ್ಮಿಬ್ಬರ ನಡುವಿನ ಸಂಬಂಧ ಸಂಪೂರ್ಣ ಸಮ್ಮತಿಯದ್ದಾಗಿತ್ತು. ತಾವು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಸಹ ಸಿದ್ಧರಾಗಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ ಮಹತ್ವದ ಆದೇಶ ಹೊರಡಿಸಿದೆ.

ಕ್ರಿಮಿನಲ್ ಕಾನೂನು ಅತ್ಯಂತ ಗಂಭೀರವಾದ ಸಾಧನವಾಗಿದ್ದು, ಕುಟುಂಬದ ಒಪ್ಪಿಗೆ ಇಲ್ಲ ಅಥವಾ ಸಮಾಜಕ್ಕೆ ಮುಜುಗರವಾಗುತ್ತದೆ ಎಂಬ ಕಾರಣಕ್ಕೆ ಇಬ್ಬರು ವಯಸ್ಕರ ನಡುವಿನ ಸಮ್ಮತಿಯ ಸಂಬಂಧವನ್ನು ಅಪರಾಧವೆಂದು ಪರಿಗಣಿಸಲು ಅದನ್ನು ಬಳಸಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದಾಗ ಯುವಕನಿಂದ ಯಾವುದೇ ಬಲವಂತ, ಬೆದರಿಕೆ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಪ್ರಾಥಮಿಕವಾಗಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಇದು ಇಬ್ಬರು ವಯಸ್ಕರ ನಡುವಿನ ಪರಸ್ಪರ ಸಮ್ಮತಿಯ ಸಂಬಂಧವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೇವಲ 19 ವರ್ಷದ ಯುವಕನನ್ನು ಜೈಲಿನಲ್ಲೇ ಮುಂದುವರಿಸುವುದು ಆತನ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೊರ ಜಗತ್ತಿಗಿಂತ ಜೈಲಿನ ವಾತಾವರಣವೇ ಆತನಿಗೆ ಹೆಚ್ಚಿನ ಅಪಾಯ ಉಂಟುಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಿರುವ ಹೈಕೋರ್ಟ್, ಜೈಲು ಅಧಿಕಾರಿಗಳಿಗೆ ಇ-ಮೇಲ್ ಮೂಲಕ ತಕ್ಷಣ ಆದೇಶದ ಪ್ರತಿಯನ್ನು ರವಾನಿಸಿ, ಯುವಕನನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚಿಸಿದೆ.

ಪ್ರಕರಣದ ಹಿನ್ನೆಲೆ

19 ವರ್ಷದ ಧನುಷ್ ಹಾಗೂ ಅದೇ ವಯಸ್ಸಿನ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಯುವತಿಯ ದೂರಿನ ಆಧಾರದ ಮೇಲೆ ಬೆಂಗಳೂರಿನ ಪೊಲೀಸ್ ಠಾಣೆಯೊಂದರಲ್ಲಿ ಧನುಷ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 64 (ಅತ್ಯಾಚಾರ) ಮತ್ತು ಸೆಕ್ಷನ್ 69 (ಮದುವೆಯಾಗುವ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಬಂಧ ಬೆಳೆಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಯುವಕನ ಬಿಡುಗಡೆಗೆ ಆದೇಶ ನೀಡಿ ಮುಂದಿನ ವಿಚಾರಣೆಗೆ ತಡೆ ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img