ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ನೀಡಿದ ದೇಣಿಗೆ ಹಾಗೂ ಕಾಣಿಕೆ ಹಣದ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣವನ್ನು ತನಿಖೆಯ ಹೆಸರಿನಲ್ಲಿ ಮುಚ್ಚಿಹಾಕುವ ಪ್ರಯತ್ನ ಮಾಡದೆ, ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ಇದು ಕೇವಲ ಹಣದ ಕಳ್ಳತನವಲ್ಲ, ಶ್ರೀರಾಮ ಹಾಗೂ ಅವರ ಮೇಲೆ ಅಪಾರ ಭಕ್ತಿ ಹೊಂದಿರುವ ಲಕ್ಷಾಂತರ ಭಕ್ತರ ನಂಬಿಕೆಗೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದ್ದಾರೆ.
“ಸದಾಚಾರ, ಸತ್ಯ ಮತ್ತು ಧರ್ಮದ ಪ್ರತೀಕವಾಗಿರುವ ಶ್ರೀರಾಮನ ವಿರುದ್ಧ ಹಾಗೂ ಅವರ ಭಕ್ತರ ವಿಶ್ವಾಸದ ವಿರುದ್ಧ ಈ ಕೃತ್ಯ ಎಸಗಲಾಗಿದೆ. ಈ ಪ್ರಕರಣ ದೇಶದಾದ್ಯಂತ ಜನರನ್ನು ಆಘಾತಕ್ಕೀಡು ಮಾಡಿದೆ” ಎಂದು ಬರೆದಿದ್ದಾರೆ.
ಲಕ್ಷಾಂತರ ಭಕ್ತರು ತಮ್ಮ ಭಕ್ತಿಭಾವದಿಂದ ದೇವಸ್ಥಾನಕ್ಕೆ ಕಾಣಿಕೆ ಹಾಗೂ ದೇಣಿಗೆ ನೀಡುತ್ತಾರೆ. ಆ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಕಳ್ಳತನ ನಡೆಸಿರುವುದು ಗಂಭೀರ ಅಪರಾಧ ಮಾತ್ರವಲ್ಲ, ಧಾರ್ಮಿಕ ನಂಬಿಕೆಗೆ ಮಾಡಿದ ದ್ರೋಹವೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆಯನ್ನು ಎತ್ತಿರುವ ಪ್ರಿಯಾಂಕಾ ಗಾಂಧಿ, “ಕೆಳಮಟ್ಟದ ಸಿಬ್ಬಂದಿ ಮಾತ್ರ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಗಿತಗೊಳಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ದೇಣಿಗೆಯನ್ನು ದುರ್ಬಳಕೆ ಮಾಡಲು ಸಾಧ್ಯವೇ? ಅಥವಾ ಇದರ ಹಿಂದೆ ಪ್ರಭಾವಿ ವ್ಯಕ್ತಿಗಳನ್ನೂ ಒಳಗೊಂಡ ದೊಡ್ಡ ಪಿತೂರಿ ಇದೆಯೇ?” ಎಂದು ಪ್ರಶ್ನಿಸಿದ್ದಾರೆ.
ಪ್ರಕರಣವನ್ನು ತನಿಖೆಯ ಹೆಸರಿನಲ್ಲಿ ಮರೆಮಾಚುವ ಬದಲು, ಸಂಪೂರ್ಣ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಕಳ್ಳತನದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಕಾನೂನಿನ ಮುಂದೆ ತಂದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕಾಂಗ್ರೆಸ್ ನಾಯಕಿ ಒತ್ತಾಯಿಸಿದ್ದಾರೆ.



