ವಿಜಯಸಾಕ್ಷಿ ಸುದ್ದಿ, ಗದಗ: ವೀರೇಶ್ವರ ಪುಣ್ಯಾಶ್ರಮದಲ್ಲಿ ಕಳೆದ 11 ವರ್ಷಗಳಿಂದ ಯಾವುದೇ ದೇಣಿಗೆ ಪಡೆಯದೆ ಉಚಿತ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪುಟ್ಟರಾಜ ಅಜ್ಜನವರ ಸೇವೆಯಲ್ಲಿ ಜಾತಿ ಅಥವಾ ರಾಜಕೀಯ ಬೆರೆಸಬಾರದು ಎಂದು ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ಉಪಾಧ್ಯಕ್ಷ ರಮೇಶ ಮುಳಗುಂದ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮುಖಂಡ ರಾಜು ಖಾನಪ್ಪನವರ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು.
“ಸಾಮೂಹಿಕ ವಿವಾಹಕ್ಕಾಗಿ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆದಿಲ್ಲ. ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸಮಾಜಸೇವಕ ಪೀರಸಾಬ್ ಕೌತಾಳ ಭರಿಸುತ್ತಿದ್ದಾರೆ. ವಧು-ವರರಿಗೆ ಅಗತ್ಯ ವಸ್ತುಗಳನ್ನೂ ಉಚಿತವಾಗಿ ನೀಡಲಾಗುತ್ತಿದೆ. ನಾವು ತನು-ಮನ-ಧನದಿಂದ ಸೇವೆ ಮಾಡುತ್ತಿದ್ದೇವೆ. ದೇಣಿಗೆ ಪಡೆದಿದ್ದೇವೆ ಎಂಬುದಕ್ಕೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ” ಎಂದು ಸವಾಲು ಹಾಕಿದರು.
ಪುಟ್ಟರಾಜ ಗವಾಯಿಗಳು ಹಾಗೂ ಪಂಚಾಕ್ಷರಿ ಅಜ್ಜನವರ ಪುಣ್ಯಭೂಮಿಯಾದ ವೀರೇಶ್ವರ ಪುಣ್ಯಾಶ್ರಮದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆಗಳು ಸೂಕ್ತವಲ್ಲ. ಹಿಂದೂ ಧರ್ಮವೇ ಎಲ್ಲರನ್ನು ಸಮಾನವಾಗಿ ಕಾಣುವ ಸಂದೇಶ ನೀಡುತ್ತದೆ. ಹೀಗಿರುವಾಗ ಮಠದ ಸೇವಾ ಕಾರ್ಯಗಳ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.
ರಾಜು ಖಾನಪ್ಪನವರು ಮೊದಲು ಹಿಂದೂ ಧರ್ಮದ ತತ್ವಗಳನ್ನು ಅಧ್ಯಯನ ಮಾಡಬೇಕು. ಪ್ರತಿ ವರ್ಷ ಜಾತ್ರಾ ಮಹೋತ್ಸವದ ಅಂಗವಾಗಿ ರಸಮಂಜರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಅವರು ಕೂಡ ಕಾರ್ಯಕ್ರಮಗಳಿಗೆ ಬಂದು ವಾಸ್ತವ ಅರಿಯಲಿ ಎಂದು ಹೇಳಿದರು.
ಬಳಗದ ಸದಸ್ಯ ವಿನೋದ್ ಸಿದ್ದಲಿಂಗ ಮಾತನಾಡಿ, ಪುಟ್ಟರಾಜ ಅಜ್ಜನವರ ಜಯಂತಿ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮಾಜದಲ್ಲಿ ಸಾಮರಸ್ಯ ಬೆಳೆಸುವ ಉದ್ದೇಶದಿಂದ ನಡೆಸಲಾಗುತ್ತಿದೆ. ಮಠದಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಎಲ್ಲ ಸಮುದಾಯದ ಭಕ್ತರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಪೀರಸಾಬ್ ಕೌತಾಳ ಅವರು ನಗರಸಭೆಯ ಮೂಲಕ ಶ್ರೀಮಠಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಹೈಮಾಸ್ಟ್ ದೀಪ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದು, ಜಾತ್ರಾ ಮಹೋತ್ಸವ ಯಶಸ್ವಿಯಾಗಲು ತನು-ಮನ-ಧನದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆಯನ್ನು ಪ್ರಶ್ನಿಸುವುದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಚಂದ್ರು ಕಡಕೋಳ, ಅನಿಲ್ ಶಿಂಗಟಾಲಕೇರಿ, ಹನುಮಂತಪ್ಪ ಆಸಂಗಿ, ದಾವಲ ಇರಕಲ್, ಅಜರುದ್ದೀನ್ ಮೂಲಿಮನಿ ಹಾಗೂ ರಜಾಕ್ ಸೂಡಿ ಉಪಸ್ಥಿತರಿದ್ದರು.
“ಕಳೆದ 11 ವರ್ಷಗಳಿಂದ ವೀರೇಶ್ವರ ಪುಣ್ಯಾಶ್ರಮದಲ್ಲಿ ಯಾರಿಂದಲೂ ಒಂದು ರೂಪಾಯಿ ದೇಣಿಗೆ ಪಡೆಯದೇ ಸಾಮೂಹಿಕ ವಿವಾಹ ಸೇರಿದಂತೆ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ದೇಣಿಗೆ ಪಡೆದಿದ್ದೇವೆ ಎಂಬುದಕ್ಕೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ.”
– ರಮೇಶ ಮುಳಗುಂದ, ಉಪಾಧ್ಯಕ್ಷರು, ದಿ. ಕೆ.ಎಚ್. ಪಾಟೀಲ ಅಭಿಮಾನಿ ಬಳಗ



