HomeGadag Newsಶ್ರೀಗಳ ಹೇಳಿಕೆಯ ಹಿಂದೆ ಕಾಣದ ಕೈವಾಡ: ವಸಂತಗೌಡ ಪೊಲೀಸಪಾಟೀಲ

ಶ್ರೀಗಳ ಹೇಳಿಕೆಯ ಹಿಂದೆ ಕಾಣದ ಕೈವಾಡ: ವಸಂತಗೌಡ ಪೊಲೀಸಪಾಟೀಲ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ. ಕಲ್ಲಯ್ಯಜ್ಜನವರು ತಮ್ಮ ವಿರುದ್ಧ ಮಾಡಿರುವ ಜೀವ ಬೆದರಿಕೆ ಹಾಗೂ ಹಣದ ಬೇಡಿಕೆ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಅವುಗಳನ್ನು ಸಾಬೀತುಪಡಿಸಬೇಕು ಎಂದು ಪುಣ್ಯಾಶ್ರಮದ ಸೋಲ್ ಟ್ರಸ್ಟ್ ಸದಸ್ಯರು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೋಲ್ ಟ್ರಸ್ಟ್ ಸದಸ್ಯ ವಸಂತಗೌಡ ಪೊಲೀಸಪಾಟೀಲ, ಕಳೆದ 40 ವರ್ಷಗಳಿಂದ ಶ್ರೀಮಠಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. 1987ರಿಂದ ಪುಟ್ಟರಾಜ ಗವಾಯಿಗಳ ಕಾಲದಿಂದಲೂ ಮಠದೊಂದಿಗೆ ನಂಟು ಹೊಂದಿದ್ದೇನೆ. ಏಕಾಏಕಿ ತಮ್ಮ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿರುವುದು ತೀವ್ರ ನೋವುಂಟು ಮಾಡಿದೆ. ಶ್ರೀಗಳ ಈ ಹೇಳಿಕೆಯ ಹಿಂದೆ ಕಾಣದ ಕೈವಾಡವಿದ್ದು, ಯಾರೋ ಪ್ರೇರಣೆ ನೀಡಿ ಈ ರೀತಿಯ ಹೇಳಿಕೆ ಕೊಡಿಸಿದ್ದಾರೆ ಎನ್ನುವ ಅನುಮಾನವಿದೆ ಎಂದು ಆರೋಪಿಸಿದರು.

ರಾಜು ಖಾನಪ್ಪನವರ ಅವರು ಮಠದ ಲೆಕ್ಕಪತ್ರಗಳ ಬಗ್ಗೆ ಅಲ್ಲ, ದೇಣಿಗೆ ಸ್ವೀಕಾರ ಮತ್ತು ರಸೀದಿ ನೀಡುವ ಪ್ರಕ್ರಿಯೆ ಕುರಿತು ಪ್ರಶ್ನಿಸಿದ್ದರು. ಆ ಪ್ರಶ್ನೆಯಿಂದಲೇ ಮಠದ ಗೌರವಕ್ಕೆ ಧಕ್ಕೆಯಾಗುವಂತಹದ್ದು ಏನೂ ಇಲ್ಲ ಎಂದು ಹೇಳಿದರು.

ಸೋಲ್ ಟ್ರಸ್ಟ್ ಸದಸ್ಯ ಶಿವರುದ್ರಪ್ಪ ಇಟಗಿ ಮಾತನಾಡಿ, ಪೀಠಾಧಿಪತಿಗಳಿಂದ ₹10 ಲಕ್ಷ ಹಣ ಕೇಳಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು. ತಾವು ಪ್ರತಿವರ್ಷ ವೀರೇಶ್ವರ ಪುಣ್ಯಾಶ್ರಮ ಸೇರಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಿದ್ದು, ಇಲ್ಲಿಯವರೆಗೆ ಪುಣ್ಯಾಶ್ರಮಕ್ಕೇ ₹4.50 ಲಕ್ಷಕ್ಕೂ ಅಧಿಕ ದೇಣಿಗೆ ನೀಡಿರುವುದಾಗಿ ಹೇಳಿ, ಅದರ ರಸೀದಿಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ತಮ್ಮ ಸಹಿಯಿಲ್ಲದೆ ಟ್ರಸ್ಟ್‌ನಲ್ಲಿ ಠರಾವು ಮಾಡಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ದೂರು ನೀಡಿ ಹಣಕಾಸು ವ್ಯವಹಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದೆ. ಇದೇ ಕಾರಣಕ್ಕೆ ತಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.

ಟ್ರಸ್ಟ್ ಸದಸ್ಯ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ಪುಣ್ಯಾಶ್ರಮವು ಲಕ್ಷಾಂತರ ಭಕ್ತರ ದೇಣಿಗೆಯಿಂದ ಬೆಳೆದಿದೆ. ದೇಣಿಗೆ ನೀಡಿದವರ ಹೆಸರನ್ನು ರಥದ ಗಾಲಿ ಸೇರಿದಂತೆ ವಿವಿಧೆಡೆ ದಾಖಲಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ನಾಲ್ಕು ವರ್ಷಗಳ ಹಿಂದೆ ದಾಖಲಿಸಿದ ಹೆಸರಿನ ಬಗ್ಗೆ ಈಗ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅಚ್ಚರಿ ತಂದಿದೆ ಎಂದರು.

ಜಾತ್ರೆ ಈಗಾಗಲೇ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಗೊಂದಲ ಸೃಷ್ಟಿಸದೆ ಭಕ್ತರೆಲ್ಲರೂ ಸೇರಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು. ಬಳಿಕ ಸಮಾಜದ ಹಿರಿಯರು, ಭಕ್ತರು ಹಾಗೂ ಶ್ರೀಗಳನ್ನು ಒಳಗೊಂಡ ಸಭೆ ನಡೆಸಿ ಎಲ್ಲ ವಿಚಾರಗಳನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿದರು.

ಡಾ. ಪ್ರಕಾಶ ಬಸರಿಗಿಡದ ಮಾತನಾಡಿ, ಪುಣ್ಯಾಶ್ರಮದ ಆವರಣದಲ್ಲಿ ತಮ್ಮ ಪೂರ್ವಜರ ಸಮಾಧಿ ಇದ್ದು, ಅದರ ಕುರಿತು ಅನಗತ್ಯ ಆರೋಪ ಮಾಡಲಾಗುತ್ತಿದೆ. ಮಠದ ಆಸ್ತಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ತಾವು ಯಾವುದೇ ಆಸ್ತಿ ಕಬಳಿಸುವ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಆರ್. ಹಿರೇಮಠ, ಚನ್ನಬಸಯ್ಯ ಬಂಕಾಪೂರ, ಪರಶುರಾಮ ಕಟ್ಟಿಮನಿ, ಸಂಗಮೇಶ ದುಂದೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“1987ರಿಂದ ಶ್ರೀಮಠದ ಸೇವೆ ಮಾಡುತ್ತಿದ್ದೇನೆ. ಶ್ರೀಗಳ ಹೇಳಿಕೆಯಿಂದ ತುಂಬಾ ನೋವಾಗಿದೆ. ಅವರ ಹೇಳಿಕೆಯ ಹಿಂದೆ ಕಾಣದ ಕೈವಾಡವಿದೆ ಎನ್ನುವ ಅನುಮಾನ ನಮ್ಮನ್ನು ಕಾಡುತ್ತಿದೆ.”

– ವಸಂತಗೌಡ ಪೊಲೀಸಪಾಟೀಲ, ಸೋಲ್ ಟ್ರಸ್ಟಿ, ವೀರೇಶ್ವರ ಪುಣ್ಯಾಶ್ರಮ

“ಪೀಠಾಧಿಪತಿಗಳ ಬಳಿ ₹10 ಲಕ್ಷ ಕೇಳಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು. ನಾನು ಪ್ರತಿವರ್ಷ ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುತ್ತೇನೆ, ಹಣ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.”

– ಇಟಗಿ ಶಿವರುದ್ರಪ್ಪ, ಸೋಲ್ ಟ್ರಸ್ಟ್ ಸದಸ್ಯ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img