ವಿಜಯಸಾಕ್ಷಿ ಸುದ್ದಿ, ಗದಗ: ಪರಮಪೂಜ್ಯ ಗಾನಯೋಗಿ ಶಿವಯೋಗಿ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 82ನೇ ಹಾಗೂ ಪದ್ಮಭೂಷಣ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 16ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜುಲೈ 6ರಂದು ಗದಗದಲ್ಲಿ ರಾಷ್ಟ್ರಮಟ್ಟದ ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ.
ಈ ಕುರಿತು ಗದಗ-ಬೆಟಗೇರಿ ಜನರಲ್ ವರ್ಕರ್ಸ್ ಹಮಾಲರು ಹಾಗೂ ಚಕ್ಕಡಿಯವರ ಸಮಿತಿಯ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಆದಪ್ಪ ಮಾರೆಪ್ಪನವರ ಮಾತನಾಡಿ, ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿರುವ ಕುಸ್ತಿ ಕಲೆ ಶಿಸ್ತು, ಧೈರ್ಯ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವ ಪರಂಪರೆಯ ಕ್ರೀಡೆಯಾಗಿದೆ. ಯುವಜನರು ಈ ಕಲೆಯತ್ತ ಆಕರ್ಷಿತರಾಗಬೇಕು ಹಾಗೂ ಗ್ರಾಮೀಣ ಸೊಗಡಿನ ಕುಸ್ತಿ ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.
ಜುಲೈ 5ರಂದು ವಿವಿಧ ರಾಜ್ಯಗಳ ಹೆಸರಾಂತ ಪೈಲ್ವಾನರು ಗದಗಕ್ಕೆ ಆಗಮಿಸಲಿದ್ದು, ಜುಲೈ 6ರಂದು ಮಧ್ಯಾಹ್ನ 3 ಗಂಟೆಗೆ ವೀರೇಶ್ವರ ಪುಣ್ಯಾಶ್ರಮದ ಸಮೀಪದ ಕುಸ್ತಿ ಮೈದಾನದಲ್ಲಿ (ಕೆ.ಎಚ್. ಪಾಟೀಲ ಸಭಾಭವನದ ಎದುರು) ಪಂದ್ಯಾವಳಿ ನಡೆಯಲಿದೆ. ಹಿರಿಯ ಪೈಲ್ವಾನರು ಮತ್ತು ನಿರ್ಣಾಯಕರ ಮಾರ್ಗದರ್ಶನದಲ್ಲಿ ಕುಸ್ತಿಗಳನ್ನು ಶಿಸ್ತಿನಿಂದ ನಡೆಸಲಾಗುವುದು ಎಂದು ತಿಳಿಸಿದರು.
ಕುಸ್ತಿ ಅಭಿಮಾನಿಗಳು, ದಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಮಕ್ತುಂಸಾಬ ನಾಗನೂರ, ಕಾರ್ಯದರ್ಶಿ ಇಮಾಮಸಾಬ ರೋಣದ, ಖಜಾಂಚಿ ಶಂಕ್ರಪ್ಪ ಯರಗುಡಿ, ಕರ್ನಾಟಕ ರಾಜ್ಯ ಹಮಾಲರ ಒಕ್ಕೂಟದ ರಾಜ್ಯಾಧ್ಯಕ್ಷ ಅಯ್ಯಪ್ಪ ನಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



