ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜಾನುವಾರುಗಳ ಮೇವು ಉಳಿಸಿಕೊಳ್ಳಲು ಲಕ್ಷ್ಮೇಶ್ವರದ ರೈತರೊಬ್ಬರು ಬಾಡಿಗೆ ಟ್ಯಾಂಕರ್ ಮೂಲಕ ನೀರುಣಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಪಟ್ಟಣದ ರೈತ ಪ್ರಕಾಶ ಮೇವುಂಡಿ ಅವರು ದನಕರುಗಳ ಮೇವಿಗಾಗಿ ಬಿತ್ತನೆ ಮಾಡಿದ್ದ ಜೋಳದ ಬೆಳೆ ಒಣಗದಂತೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಹಾಕಿಸುತ್ತಿದ್ದಾರೆ. ಹೆಸರು, ಹತ್ತಿ ಸೇರಿದಂತೆ ಇತರೆ ಬೆಳೆಗಳು ಮಳೆ ಕೊರತೆಯಿಂದ ಒಣಗುತ್ತಿದ್ದರೂ, ಜಾನುವಾರುಗಳಿಗೆ ಮೇವು ಒದಗಿಸುವ ಜೋಳದ ಬೆಳೆಯನ್ನು ಮಾತ್ರ ಹೇಗಾದರೂ ಉಳಿಸಬೇಕೆಂಬ ಹಠದಿಂದ ಈ ಪ್ರಯತ್ನ ನಡೆಸುತ್ತಿದ್ದಾರೆ.
“ನಾವು ಹೇಗಾದರೂ ಬದುಕುತ್ತೇವೆ. ಆದರೆ ಜಾನುವಾರುಗಳ ರಕ್ಷಣೆಯೇ ದೊಡ್ಡ ಸವಾಲಾಗಿದೆ. ಕಳೆದ ವರ್ಷದ ಮೇವು ಬಹುತೇಕ ಖಾಲಿಯಾಗಿದೆ. ಈಗ ಜೋಳದ ಬೆಳೆ ಒಣಗಿದರೆ ದುಡ್ಡು ಕೊಟ್ಟರೂ ಮೇವು ಸಿಗುವುದಿಲ್ಲ. ಅದಕ್ಕಾಗಿ ಕಷ್ಟವಾದರೂ ಟ್ಯಾಂಕರ್ ಮೂಲಕ ನೀರು ಹಾಕಿಸಿ ಬೆಳೆ ಉಳಿಸಿಕೊಳ್ಳುತ್ತಿದ್ದೇನೆ” ಎಂದು ರೈತ ಪ್ರಕಾಶ ಮೇವುಂಡಿ ತಮ್ಮ ಅಳಲು ತೋಡಿಕೊಂಡರು.
ಮಳೆ ಕೊರತೆಯಿಂದ ರೈತರ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ದೃಶ್ಯ ಜಿಲ್ಲೆಯ ರೈತರ ಸಂಕಷ್ಟಕ್ಕೆ ಹಿಡಿದ ಕನ್ನಡಿಯಾಗಿದೆ.
“ನಾವು ಹೇಗಾದರೂ ಬದುಕುತ್ತೇವೆ; ಆದರೆ ನಮ್ಮ ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ಈಗ ದೊಡ್ಡ ಸವಾಲಾಗಿದೆ.”
– ರೈತ ಪ್ರಕಾಶ ಮೇವುಂಡಿ



