ಸಿಂಧುದುರ್ಗ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ರೆಸಾರ್ಟ್ನಲ್ಲಿ ನಡೆದ ನಿರ್ಲಕ್ಷ್ಯದ ಸಾಹಸ ಯುವಕನ ಜೀವ ಬಲಿಯಾಗಿಸಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ 25 ವರ್ಷದ ಶ್ರೇಣಿಕ್ ಮಿಲಿಂದ್ ಟಾಕಳೆ ಈಜುಕೊಳದ ಆಳ ತಿಳಿಯದೆ ಹೆಡ್ ಡೈವ್ ಮಾಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ನೇಹಿತರ ಸಂಭ್ರಮದ ನಡುವೆ ಸುಮಾರು 8ರಿಂದ 10 ಅಡಿ ಎತ್ತರದ ಗೋಡೆಯಿಂದ ಈಜುಕೊಳಕ್ಕೆ ತಲೆಕೆಳಗಾಗಿ ಹಾರಿದ ಶ್ರೇಣಿಕ್, ಕೇವಲ ನಾಲ್ಕು ಅಡಿ ಆಳವಿದ್ದ ಮಕ್ಕಳ ಈಜುಕೊಳಕ್ಕೆ ಬಿದ್ದಿದ್ದಾರೆ. ಪರಿಣಾಮ ಅವರ ತಲೆ ನೇರವಾಗಿ ಕಾಂಕ್ರೀಟ್ ನೆಲಕ್ಕೆ ಅಪ್ಪಳಿಸಿ ಮಾರಣಾಂತಿಕ ಗಾಯವಾಗಿದೆ.
ದುರಂತದ ದೃಶ್ಯ ಸ್ನೇಹಿತನ ಮೊಬೈಲ್ನಲ್ಲಿ ಸೆರೆ ಸಿಕ್ಕಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಗಂಭೀರವಾಗಿ ಗಾಯಗೊಂಡ ಶ್ರೇಣಿಕ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಮಾಲ್ವಣ್ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಣೇಶ್ ಮಾನೆ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಇದೇ ವೇಳೆ ರೆಸಾರ್ಟ್ಗಳಲ್ಲಿ ಅಪಾಯಕಾರಿ ಸಾಹಸಗಳಿಗೆ ಕೈಹಾಕದಂತೆ ಪೊಲೀಸರು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.



