ರಾಯಚೂರು: ಮಹಾಲಯ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ರಾಯಚೂರಿನ ಲೋಕೋಪಯೋಗಿ ಇಲಾಖೆ (PWD) ಕಚೇರಿ ಆವರಣದಲ್ಲಿ ವಾಮಾಚಾರ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ಮೇಲ್ಭಾಗದಲ್ಲಿದ್ದ ಹುಣಸೆ ಮರಕ್ಕೆ ಮಾನವ ಆಕೃತಿಯ ಕಪ್ಪು ಗೊಂಬೆಯೊಂದನ್ನು ನೇತುಹಾಕಲಾಗಿತ್ತು ಎಂದು ತಿಳಿದುಬಂದಿದೆ.
ಕಚೇರಿಯ ಸೌಲಭ್ಯಗಳ ಪರಿಶೀಲನೆಗೆ ತೆರಳಿದ್ದ ಸಿಬ್ಬಂದಿಯೊಬ್ಬರಿಗೆ ಮರಕ್ಕೆ ನೇತುಹಾಕಿದ್ದ ಕಪ್ಪು ಗೊಂಬೆ ಮೊದಲು ಕಾಣಿಸಿಕೊಂಡಿದೆ. ಬಳಿಕ ಅವರು ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಗೊಂಬೆಯನ್ನು ಸುಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ.
ಕಚೇರಿಯಲ್ಲಿ ಬಾಕಿ ಉಳಿದಿರುವ ಬಿಲ್‌ಗಳು ಹಾಗೂ ವಿಲೇವಾರಿಯಾಗದೆ ಉಳಿದಿರುವ ಫೈಲ್‌ಗಳಿಂದ ಬೇಸತ್ತ ಯಾರೋ ಈ ಕೃತ್ಯ ಎಸಗಿರಬಹುದು ಎಂಬ ಆರೋಪ ಕೇಳಿಬಂದಿದೆ. ಆದರೆ, ಗೊಂಬೆಯನ್ನು ಯಾರು ನೇತುಹಾಕಿದ್ದಾರೆ ಮತ್ತು ಅದರ ಹಿಂದಿನ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘಟನೆಯ ಬಳಿಕ ಕಚೇರಿ ಸಿಬ್ಬಂದಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಚೇರಿಯ ಕೆಲಸದ ವಾತಾವರಣಕ್ಕೆ ಅಡ್ಡಿಯಾಗಿರುವ ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ.



