ಬೆಂಗಳೂರು: ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಇಂದಿನಿಂದ ಒಂದು ತಿಂಗಳ ಕಾಲ ಆರಂಭವಾಗಿದೆ.
ಈಗಾಗಲೇ ಮತದಾರರ ಮ್ಯಾಪಿಂಗ್ ಕಾರ್ಯ ಮುಕ್ತಾಯವಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಮನೆಗೆ ಭೇಟಿ ನೀಡಿ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಲಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 5,54,32,314 ಮತದಾರರ ಪೈಕಿ 5,07,79,810 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಶೇಕಡಾ 91.61ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನೂ 46,52,504 ಮತದಾರರ ಮ್ಯಾಪಿಂಗ್ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಭಿಯಾನದ ಮೂಲಕ ನಕಲಿ, ಅನರ್ಹ ಹಾಗೂ ಅಕ್ರಮ ಮತದಾರರ ಹೆಸರುಗಳನ್ನು ಪತ್ತೆಹಚ್ಚಿ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಜೊತೆಗೆ ಮತದಾರರ ಹೆಸರು ಪರಿಶೀಲನೆ, ತಿದ್ದುಪಡಿ, ಹೊಸ ಹೆಸರು ಸೇರ್ಪಡೆ ಹಾಗೂ ಮೃತ ಅಥವಾ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಕಾರ್ಯವೂ ನಡೆಯಲಿದೆ.
ಬಿಎಲ್ಓಗಳು ಮನೆಗಳಿಗೆ ಭೇಟಿ ನೀಡಿ ಎಸ್ಐಆರ್ ಅರ್ಜಿಗಳನ್ನು ವಿತರಿಸಲಿದ್ದು, ಮತದಾರರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಹಿ ಹಾಕಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪ್ರಮುಖ ದಿನಾಂಕಗಳು:
- ಜುಲೈ 29ರವರೆಗೆ: ಮನೆಮನೆ ಭೇಟಿ ಮತ್ತು ಮಾಹಿತಿ ಸಂಗ್ರಹ
- ಜುಲೈ 29ರೊಳಗೆ: ಮತಗಟ್ಟೆಗಳ ಮರುಹೊಂದಾಣಿಕೆ
- ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟ
- ಆಗಸ್ಟ್ 5–ಸೆಪ್ಟೆಂಬರ್ 4: ಆಕ್ಷೇಪಣೆ ಸಲ್ಲಿಕೆ ಅವಕಾಶ
- ಆಗಸ್ಟ್ 5–ಅಕ್ಟೋಬರ್ 3: ಹಕ್ಕು ಮತ್ತು ಆಕ್ಷೇಪಣೆ ವಿಲೇವಾರಿ
- ಅಕ್ಟೋಬರ್ 10: ಅಂತಿಮ ಮತದಾರರ ಪಟ್ಟಿ ಪ್ರಕಟ
- ಅಗತ್ಯ ದಾಖಲೆಗಳು:
ಮತದಾರರು ತಮ್ಮ ಕುಟುಂಬ ಸದಸ್ಯರ ಗುರುತಿನ ಚೀಟಿ, ವೋಟರ್ ಐಡಿ, ಆಧಾರ್ ಕಾರ್ಡ್, ವಿಳಾಸ ದೃಢೀಕರಣ ಪತ್ರ ಹಾಗೂ ಪಾಸ್ಪೋರ್ಟ್ ಅಳತೆಯ ಫೋಟೋವನ್ನು ಸಿದ್ಧವಾಗಿಟ್ಟುಕೊಳ್ಳಬೇಕೆಂದು ಸೂಚಿಸಲಾಗಿದೆ.
ಮತದಾರರ ಹಕ್ಕು ಕಾಪಾಡಲು ಈ ಅಭಿಯಾನದಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಚುನಾವಣಾ ಆಯೋಗ ಮನವಿ ಮಾಡಿದೆ.



