ವಿಜಯಸಾಕ್ಷಿ ಸುದ್ದಿ, ಗದಗ: ಕೋಮು ಸೌಹಾರ್ದಕ್ಕೆ ಹೆಸರಾಗಿರುವ ಗದಗ ಜಿಲ್ಲೆಯಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಗತ್ಯವಿದ್ದರೆ ಗಡಿಪಾರು ಮಾಡಬೇಕು. ಕೋಮು ಉದ್ವಿಗ್ನತೆ ಸೃಷ್ಟಿಸುವ ಸಂಘಟನೆಗಳನ್ನು ಜಿಲ್ಲಾಡಳಿತ ನಿಷೇಧಿಸಬೇಕು ಎಂದು ಸಾಹಿತಿ ಬಸವರಾಜ ಸೂಳಿಬಾವಿ ಆಗ್ರಹಿಸಿದರು.
ಕೋಮು ಸೌಹಾರ್ದಕ್ಕೆ ಹೆಸರಾಗಿರುವ ಗದಗ ಜಿಲ್ಲೆಯಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟುಹಾಕುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅಗತ್ಯವಿದ್ದರೆ ಗಡಿಪಾರು ಮಾಡಬೇಕು. ಕೋಮು ಉದ್ವಿಗ್ನತೆ ಸೃಷ್ಟಿಸುವ ಸಂಘಟನೆಗಳನ್ನು ಜಿಲ್ಲಾಡಳಿತ ನಿಷೇಧಿಸಬೇಕು ಎಂದು ಸಾಹಿತಿ ಬಸವರಾಜ ಸೂಳಿಬಾವಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಶಕ್ತಿಗಳು ಲಿಂಗಾಯತ ಮಠಗಳು ಹಾಗೂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿವೆ. ಇಂತಹವರ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗದಗ ಜಿಲ್ಲೆ ವಿವಿಧ ಧರ್ಮಗಳ ಜನರು ಸೌಹಾರ್ದದಿಂದ ಬದುಕುತ್ತಿರುವ ಜಿಲ್ಲೆಯಾಗಿದ್ದು, ಎಲ್ಲ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ ಒಂದೇ ಸೌಹಾರ್ದ ಸಮಿತಿ ಕಾರ್ಯನಿರ್ವಹಿಸುತ್ತಿರುವುದು ದೇಶಕ್ಕೇ ಮಾದರಿಯಾಗಿದೆ. ಇಂತಹ ಸೌಹಾರ್ದದ ವಾತಾವರಣಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದರು.
ವೀರೇಶ್ವರ ಪುಣ್ಯಾಶ್ರಮದಲ್ಲಿ ಎಲ್ಲ ಸಮುದಾಯಗಳ ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಆಶ್ರಯ, ಶಿಕ್ಷಣ ಹಾಗೂ ಬದುಕಿನ ದಾರಿ ಕಲ್ಪಿಸಲಾಗಿದೆ. ಇಂತಹ ಆಶ್ರಮದ ಹೆಸರಿಗೆ ಧಕ್ಕೆ ತರುವ ಉದ್ದೇಶದಿಂದ ರಥದ ಚಕ್ರದ ವಿಚಾರವನ್ನು ಮುಂದಿಟ್ಟುಕೊಂಡು ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ಎಸ್.ಎನ್. ಬಳ್ಳಾರಿ ಮಾತನಾಡಿ, ಕೋಮುವಾದಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಹಿಂದೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದೇ ನಿರ್ಲಕ್ಷ್ಯ ಮುಂದುವರಿದರೆ ಜನರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ. ಅದರ ಸಂಪೂರ್ಣ ಜವಾಬ್ದಾರಿ ಆಡಳಿತದ ಮೇಲಿದೆ ಎಂದು ಎಚ್ಚರಿಸಿದರು.
ವೀರೇಶ್ವರ ಪುಣ್ಯಾಶ್ರಮವು ಸಾವಿರಾರು ಅಂಧ, ಅನಾಥ ಹಾಗೂ ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡಿದ್ದು, ಅದರ ವಿರುದ್ಧ ಅಪಪ್ರಚಾರ ನಡೆಸುವವರು ಬಹಿರಂಗ ಚರ್ಚೆಗೆ ಬರಲಿ. ಅಗತ್ಯವಿದ್ದರೆ ಇಂತಹವರ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೂ ಸಿದ್ಧ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಬರಗುಂಡಿ, ಶೇಕಣ್ಣ ಕವಳಿಕಾಯಿ, ಬಾಲರಾಜ ಅರಬರ ಹಾಗೂ ಮುತ್ತು ಬಿಳೆಯಲಿ ಉಪಸ್ಥಿತರಿದ್ದರು.



