ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬಸವಾದಿ ಶರಣರ ವಚನಗಳಲ್ಲಿ ಅಡಕವಾಗಿರುವ ಮಾನವೀಯ ಮೌಲ್ಯಗಳು, ಕಾಯಕ, ದಾಸೋಹ, ಸಮಾನತೆ ಹಾಗೂ ಸತ್ಯನಿಷ್ಠೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಿಕ್ಷಕ ಬಿ.ಬಿ. ಬಳಿಗಾರ ಹೇಳಿದರು.
ತಾಲೂಕಿನ ಶಿಗ್ಲಿ ಗ್ರಾಮದ ಸೇವಾ ಮಂದಿರದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಸೋಮವಾರ ನಡೆದ 356ನೇ ಶಿವಾನುಭವಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗುರುವಿನ ಮಾರ್ಗದರ್ಶನದಂತೆ ಜೀವನ ನಡೆಸಿದಾಗ ಆತ್ಮೋನ್ನತಿಯ ಜೊತೆಗೆ ಸಮಾಜದ ಒಳಿತಿಗೂ ಕಾರಣವಾಗಬಹುದು. ಶಿವಾನುಭವಗೋಷ್ಠಿಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಲ್ಲ; ಬದುಕಿನ ಮೌಲ್ಯಗಳನ್ನು ಅರಿಯುವ ಜ್ಞಾನ ವೇದಿಕೆಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಇಷ್ಟಲಿಂಗ ಸ್ವಾಮೀಜಿ ಹಾಗೂ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಬಸವಾದಿ ಶರಣರ ವಚನಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣ ಸಂಸ್ಕೃತಿಯ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ಶಿವಾನುಭವಗೋಷ್ಠಿಯನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜು ರಾಜಪೂತ, ಶಶಿಕಾಂತ ಹುಲಗೂರ, ಮನೋಹರ ಪತ್ತಾರ, ಈರಣ್ಣ ಅಕ್ಕೂರ, ಮಂಜುನಾಥ ಶಂಬೋಜಿ, ಶಶಿಧರ ಲೋಹಾರ, ಕುಂದನ್ಬಾಬು ಸುಂಕದ, ವಿ.ಕೆ. ನವಲೆ, ಪ್ರವೀಣ ಹುಲಗೂರ, ಚಂದ್ರು ಕರ್ಜಗಿ, ಮೌನೇಶ ಬಡಿಗೇರ, ಸುರೇಶ ಹತ್ತಿಕಾಳ ಸೇರಿದಂತೆ ಅನೇಕ ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



