ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ನೀಡಿದ ಪ್ರಕರಣ ಈಗ ಹೊಸ ಹಂತಕ್ಕೆ ತಲುಪಿದೆ. ಕಾಮಾಕ್ಷಿಪಾಳ್ಯ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಹಲವು ಶಂಕಾಸ್ಪದ ಅಂಶಗಳು ಬೆಳಕಿಗೆ ಬಂದಿವೆ.
ಸಾಕ್ಷಿದಾರ ಸಂದೀಪ್ ಅವರಿಗೆ ಕೋರ್ಟ್ನಲ್ಲಿ ಹೇಳಿಕೆ ಬದಲಾಯಿಸುವಂತೆ ಒತ್ತಡ ಹೇರಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಪುನೀತ್ ಪ್ರಮುಖವಾಗಿದ್ದು, ವಿಚಾರಣೆ ವೇಳೆ ಆತ “ನನಗೆ ಏನೂ ಗೊತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾನೆ.
ತನಿಖೆಯ ಪ್ರಕಾರ, ಸಂದೀಪ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕೋರ್ಟ್ ವಿಚಾರಣೆ ಕುರಿತು ವಿವರವಾಗಿ ಪ್ರಶ್ನಿಸಿ, ನಿರ್ದಿಷ್ಟ ಹೇಳಿಕೆ ನೀಡುವಂತೆ ಬೆದರಿಕೆ ಹಾಕಲಾಗಿದೆ. ಜೊತೆಗೆ ವಾಟ್ಸಪ್ ಕರೆ ಮೂಲಕ ವಕೀಲರಿಂದಲೂ ಒತ್ತಡ ಬಂದಿದೆ ಎಂಬ ಆರೋಪವಿದೆ.
ಇದೇ ವೇಳೆ, ಪ್ರಕರಣದಲ್ಲಿ ನಿರ್ಮಾಪಕರ ಪಾತ್ರದ ಶಂಕೆ ವ್ಯಕ್ತವಾಗಿದ್ದು, ಅವರ ಸಂಪರ್ಕ ಕುರಿತು ಪೊಲೀಸರು ದಾಖಲೆ ಸಂಗ್ರಹಿಸುತ್ತಿದ್ದಾರೆ. ಆರೋಪಿಗಳ ಮೊಬೈಲ್ಗಳನ್ನು FSLಗೆ ಕಳುಹಿಸಲಾಗಿದ್ದು, ಡಿಜಿಟಲ್ ಸಾಕ್ಷ್ಯ ಪರಿಶೀಲನೆ ನಡೆಯುತ್ತಿದೆ.
ಪುನೀತ್ ಮೊಬೈಲ್ನಿಂದ ದೊರೆಯುವ ಡೇಟಾ ಪ್ರಕರಣದ ದಿಕ್ಕನ್ನು ಬದಲಾಯಿಸಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ರಾಜಕೀಯ ಮತ್ತು ಚಿತ್ರರಂಗ ಸಂಬಂಧಿತ ತಿರುವು ಪಡೆಯುವ ಸಾಧ್ಯತೆ ಇದೆ.



