ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.
ಈ ಬೆಳವಣಿಗೆ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾಗಿದ್ದು, ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಪ್ರಲ್ಹಾದ ಜೋಶಿ, ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ ವಿಶೇಷ ನಿಯಮಾವಳಿ ಮತ್ತು ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲಾಗಿದೆ ಎಂದು ಆರೋಪಿಸಿದರು.
ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳಲಾಗಿದ್ದು, ಇಡೀ ಪ್ರಕ್ರಿಯೆಯೇ ಕಾನೂನುಬಾಹಿರ ಮತ್ತು ನಿಯಮಬಾಹಿರವಾಗಿದೆ ಎಂದು ಟೀಕಿಸಿದರು.
ಸ್ವತಂತ್ರವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕಾದ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ನೇರ ಹಸ್ತಕ್ಷೇಪ ಮಾಡಿದೆ ಎಂದು ಆರೋಪಿಸಿದ ಅವರು, ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯನ್ನು ತಮಗೆ ಅನುಕೂಲವಾಗುವಂತೆ ತಿರುಚುವ ಉದ್ದೇಶದಿಂದ ಮೇಲ್ಮಟ್ಟದಲ್ಲೇ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಎಂದು ದೂರಿದರು.
ಈ ಪರಿಷ್ಕರಣೆ ಪ್ರಕ್ರಿಯೆ ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದು, ಸ್ಥಳೀಯ ಆಡಳಿತದ ಮೇಲೆ ತೀವ್ರ ಒತ್ತಡ ಹೇರಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಸಾಮಾನ್ಯ ಮತದಾರರ ಹಕ್ಕು ಮತ್ತು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನದ ಹಿಂದೆ ಯಾರ ಹಿತಾಸಕ್ತಿ ಅಡಗಿದೆ ಎಂಬುದನ್ನು ತನಿಖೆ ಮೂಲಕ ಬಹಿರಂಗಪಡಿಸಬೇಕಾಗಿದೆ ಎಂದು ಹೇಳಿದರು.
ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹಾಗೂ ಪಾವಿತ್ರ್ಯವನ್ನು ಕಾಪಾಡಲು ತಕ್ಷಣವೇ ನಿಷ್ಪಕ್ಷಪಾತ, ಪಾರದರ್ಶಕ ಮತ್ತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಜನರ ಮುಂದಿಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.



