ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಭಾವನಾತ್ಮಕ ಕಥೆಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಎಸ್. ಮಹೇಂದರ್ ಹಾಗೂ ಜೋಗಿ ಪ್ರೇಮ್ ಅವರ ಸಾಲಿಗೆ ನಿರ್ದೇಶಕ ಕೆ. ಪ್ರಕಾಶ್ ಅಂಬಳೆ ಹೊಸ ಭರವಸೆಯಾಗಿ ಹೊರಹೊಮ್ಮಿದ್ದಾರೆ ಎಂಬ ಮಾತು ಪ್ರೇಕ್ಷಕರ ವಲಯದಲ್ಲಿ ಕೇಳಿಬರುತ್ತಿದೆ.
ನಿರ್ಮಾಪಕ ಲಯನ್ ಚಿಕ್ಕೇಗೌಡ ಟಿ.ಸಿ. ತಳದವಾದಿ ಅವರ ನಿರ್ಮಾಣದ ‘ಕಾಲಘಟ್ಟ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಜನಪದ ಸೊಗಡು, ಮಣ್ಣಿನ ಪರಿಮಳ, ಕುಟುಂಬದ ಬಾಂಧವ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಆಧರಿಸಿದ ಕಥಾಹಂದರ ಪ್ರೇಕ್ಷಕರ ಮನಸ್ಸಿಗೆ ತಟ್ಟಿದ್ದು, ವಿಶೇಷವಾಗಿ ಚಿತ್ರದ ಭಾವನಾತ್ಮಕ ದೃಶ್ಯಗಳು ಹಾಗೂ ಕ್ಲೈಮ್ಯಾಕ್ಸ್ ಅನೇಕ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತಿವೆ.
ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದ ಪ್ರತಿಭೆ ಕೆ. ಪ್ರಕಾಶ್ ಅಂಬಳೆ, ಕನ್ನಡ ಮಣ್ಣಿನ ಕಥೆಯನ್ನು ವಾಣಿಜ್ಯ ಅಂಶಗಳೊಂದಿಗೆ ಸಮತೋಲನವಾಗಿ ತೆರೆಗೆ ತಂದಿರುವುದು ಚಿತ್ರದ ವಿಶೇಷತೆ ಎನ್ನಲಾಗುತ್ತಿದೆ. ಸಂಸ್ಕೃತಿ, ಪರಂಪರೆ ಹಾಗೂ ಕುಟುಂಬದ ಮೌಲ್ಯಗಳನ್ನು ಕಥೆಯಲ್ಲಿ ಅಚ್ಚುಕಟ್ಟಾಗಿ ಹೆಣೆದಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರದ ನಿರ್ಮಾಪಕ ಲಯನ್ ಚಿಕ್ಕೇಗೌಡ ಟಿ.ಸಿ. ತಳದವಾದಿ, ಕಥೆಯ ಗುಣಮಟ್ಟಕ್ಕೆ ಯಾವುದೇ ರಾಜಿ ಮಾಡಿಕೊಳ್ಳದೆ ಚಿತ್ರ ನಿರ್ಮಾಣಕ್ಕೆ ಬೆಂಬಲ ನೀಡಿದ್ದು, ಚಿತ್ರದ ಯಶಸ್ಸಿನಲ್ಲಿ ಅವರ ಪಾತ್ರವೂ ಮಹತ್ವದ್ದಾಗಿದೆ. ಕಲಾವಿದರು ಹಾಗೂ ತಂತ್ರಜ್ಞರ ಸಮರ್ಪಕ ಕೆಲಸವೂ ಚಿತ್ರದ ಬಲವಾಗಿ ಪರಿಣಮಿಸಿದೆ.
ಕುಟುಂಬ ಸಮೇತ ವೀಕ್ಷಿಸಬಹುದಾದ ಭಾವನಾತ್ಮಕ ಚಿತ್ರವಾಗಿ ‘ಕಾಲಘಟ್ಟ’ ಹೊರಹೊಮ್ಮಿದ್ದು, ಪ್ರೇಕ್ಷಕರ ಜೊತೆಗೆ ಚಿತ್ರರಂಗದ ವಲಯ ಹಾಗೂ ಮಾಧ್ಯಮಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.



