ಬೆಂಗಳೂರು: ಬಿಜೆಪಿ ರಾಷ್ಟ್ರೀಯ ನಾಯಕ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆಯ ಬಿಜೆಪಿ ಉಸ್ತುವಾರಿ ರಾಮ್ ಮಾಧವ್ ವಿರುದ್ಧ ಗಂಭೀರ ಆರೋಪ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಕಾನೂನು ನೋಟಿಸ್ ಜಾರಿಯಾಗಿದೆ.
ರಾಮ್ ಮಾಧವ್ ಅವರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಹಾಗೂ ಅವರ ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಸುಳ್ಳು ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 356ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಅಲ್ಲದೆ, ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆಯಾಚಿಸಬೇಕು ಎಂದು ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಬಿ.ಕೆ. ಹರಿಪ್ರಸಾದ್, ರಾಮ್ ಮಾಧವ್ ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಕೊಲಂಬೊ ಮತ್ತು ಲಂಡನ್‌ನಲ್ಲಿ ನಾಲ್ಕು ರಹಸ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಲಂಡನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ಪಾಕಿಸ್ತಾನದ ಐಎಸ್‌ಐ ಮಾಜಿ ಮೇಜರ್ ಜನರಲ್ ಸೇರಿದಂತೆ ಕೆಲ ಅಧಿಕಾರಿಗಳೊಂದಿಗೆ ರಾಮ್ ಮಾಧವ್ ಸಭೆ ನಡೆಸಿದ್ದು, ಆ ಸಭೆಗಳಲ್ಲಿ ಏನು ಚರ್ಚೆಯಾಯಿತು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದರು.
ಇದೇ ವೇಳೆ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸೂಚನೆಯ ಮೇರೆಗೆ ಪಾಕಿಸ್ತಾನದೊಂದಿಗೆ ಚರ್ಚೆಗಳು ನಡೆದಿವೆ ಎಂಬ ಆರೋಪವನ್ನೂ ಹರಿಪ್ರಸಾದ್ ಮಾಡಿದ್ದರು.
‘ಆಪರೇಷನ್ ಸಿಂಧೂರ್’ ನಡೆದ ಕೆಲವೇ ತಿಂಗಳಲ್ಲಿ ರಾಮ್ ಮಾಧವ್ ಲಂಡನ್‌ಗೆ ತೆರಳಿ ನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಅವರು ಯಾವುದೇ ಸಂಸದ, ಶಾಸಕರಾಗಲಿ ಅಥವಾ ವಿದೇಶಾಂಗ ಸಚಿವಾಲಯದ ಸದಸ್ಯರಾಗಲಿ ಅಲ್ಲ. ಕೇವಲ ಆರ್‌ಎಸ್‌ಎಸ್ ಪ್ರಚಾರಕರಾಗಿರುವ ಅವರಿಗೆ ಇಂತಹ ಸಭೆಗಳನ್ನು ನಡೆಸುವ ಅಧಿಕಾರವನ್ನು ಯಾರು ನೀಡಿದರು ಎಂಬುದನ್ನು ದೇಶದ ಮುಂದೆ ಸ್ಪಷ್ಟಪಡಿಸಬೇಕು ಎಂದು ಹರಿಪ್ರಸಾದ್ ಪ್ರಶ್ನಿಸಿದ್ದರು.
ಈ ಹೇಳಿಕೆಗಳ ಬೆನ್ನಲ್ಲೇ ಇದೀಗ ರಾಮ್ ಮಾಧವ್ ಪರವಾಗಿ ಕಾನೂನು ನೋಟಿಸ್ ಜಾರಿಯಾಗಿದ್ದು, ಆರೋಪಗಳನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಲಾಗಿದೆ.



