ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸುಮಾರು 15,500 ಅಡಿ ಎತ್ತರದ ‘ಹುರ್ರಾ ಟಾಪ್’ ಶಿಖರವನ್ನು ಯಶಸ್ವಿಯಾಗಿ ಏರಿದ ಜಕ್ಕಲಿ ಗ್ರಾಮದ ಯುವ ಪರ್ವತಾರೋಹಿ ಸೃಷ್ಟಿ ಉಮೇಶ ಮೇಟಿ ಅವರನ್ನು ರೋಣ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ ಪಾಟೀಲ ಹಾಗೂ ಶಶಿಕಲಾ ಪಾಟೀಲ ಅವರ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಿಥುನ ಪಾಟೀಲ, ಸೃಷ್ಟಿ ಅವರ ಸಾಧನೆ ಗ್ರಾಮೀಣ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದ್ದು, ರಾಷ್ಟ್ರಮಟ್ಟದಲ್ಲಿ ಜಕ್ಕಲಿ ಗ್ರಾಮದ ಕೀರ್ತಿ ಹೆಚ್ಚಿಸಿದೆ ಎಂದು ಹೇಳಿದರು. ಶಶಿಕಲಾ ಪಾಟೀಲ, ಹೆಣ್ಣುಮಕ್ಕಳಿಗೆ ಸೂಕ್ತ ಅವಕಾಶ ಸಿಕ್ಕರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂಬುದನ್ನು ಸೃಷ್ಟಿ ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ, ನಿವೃತ್ತ ಪ್ರಾಂಶುಪಾಲ ಎಂ.ಎಸ್. ಕೋರಿ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



