ಹೈದರಾಬಾದ್: ಪ್ರಿಯಕರನೊಂದಿಗಿನ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ ನರ್ಸ್ ಪತ್ನಿಯೊಬ್ಬಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡನ ದೇಹಕ್ಕೆ ಕ್ಯಾನುಲಾ ಮೂಲಕ ಟಾಯ್ಲೆಟ್ ಕ್ಲೀನರ್ ಸೇರಿದಂತೆ ರಾಸಾಯನಿಕ ದ್ರವವನ್ನು ಸೇರಿಸಿ ಹತ್ಯೆ ಮಾಡಿರುವ ಆಘಾತಕಾರಿ ಪ್ರಕರಣ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.
ನಿಜಾಮಾಬಾದ್ ಜಿಲ್ಲೆಯ ನ್ಯಾಲ್ಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 35 ವರ್ಷದ ಪ್ರಶಾಂತ್ ಮೃತಪಟ್ಟವರು. ಇತ್ತೀಚೆಗಷ್ಟೇ ಗಲ್ಫ್ ದೇಶದಿಂದ ಊರಿಗೆ ಮರಳಿದ್ದ ಪ್ರಶಾಂತ್, ಪತ್ನಿ ಸಂಧ್ಯಾ ಮತ್ತು ಆಕೆಯ ಪ್ರಿಯಕರ ಅನಿಲ್ ನಡುವಿನ ಸಂಬಂಧಕ್ಕೆ ಅಡ್ಡಿಯಾಗಿದ್ದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಂಧ್ಯಾ ತನ್ನ ಪರಿಚಯದ ವೆಂಕಟ ಸಾಯಿ ಅಲಿಯಾಸ್ ಬಂಟಿಗೆ ಪ್ರಶಾಂತ್ನೊಂದಿಗೆ ಸ್ನೇಹ ಬೆಳೆಸಿ ಮದ್ಯಪಾನ ಮಾಡಿಸುವಂತೆ ಸೂಚಿಸಿದ್ದಳು. ಜೂನ್ 29ರಂದು ಇಬ್ಬರೂ ಮದ್ಯ ಸೇವಿಸಿದ ಬಳಿಕ ಕಟ್ಟಡದ ಮೇಲ್ಛಾವಣಿಗೆ ತೆರಳಿದ್ದು, ಅಲ್ಲಿ ಸಂಧ್ಯಾ ಮತ್ತು ಬಂಟಿ ಸೇರಿ ಪ್ರಶಾಂತ್ನನ್ನು ಕೆಳಕ್ಕೆ ತಳ್ಳಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರಶಾಂತ್ನನ್ನು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಮೊದಲ ಸಂಚು ವಿಫಲವಾದ ಬಳಿಕ, ನರ್ಸ್ ಆಗಿರುವ ಸಂಧ್ಯಾ ತನ್ನ ವೈದ್ಯಕೀಯ ಜ್ಞಾನವನ್ನು ದುರುಪಯೋಗಪಡಿಸಿಕೊಂಡು ಆಸ್ಪತ್ರೆಯಲ್ಲೇ ಕ್ಯಾನುಲಾ ಮೂಲಕ ಟಾಯ್ಲೆಟ್ ಕ್ಲೀನರ್ ಹಾಗೂ ಇತರೆ ರಾಸಾಯನಿಕಗಳನ್ನು ದೇಹಕ್ಕೆ ಸೇರಿಸಿದ್ದಾಳೆ. ಇದರಿಂದ ಪ್ರಶಾಂತ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಪ್ರಶಾಂತ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರ ತಾಯಿ ಜುಲೈ 1ರಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಪ್ರಕರಣದ ಹಿಂದಿನ ಸಂಚನ್ನು ಬಯಲಿಗೆಳೆದಿದ್ದಾರೆ.
ವಿಚಾರಣೆ ವೇಳೆ ವೆಂಕಟ ಸಾಯಿ ಅಲಿಯಾಸ್ ಬಂಟಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದು, ಸಂಧ್ಯಾಳ ಸೂಚನೆಯಂತೆ ಪ್ರಶಾಂತ್ನನ್ನು ಟೆರೆಸ್ನಿಂದ ತಳ್ಳಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯಕ್ಕಾಗಿ ಸಂಧ್ಯಾಳೇ ಹಣ ನೀಡಿದ್ದಳು ಎಂಬ ಮಾಹಿತಿಯನ್ನೂ ಆತ ನೀಡಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 4ರಂದು ಸಂಧ್ಯಾ, ಆಕೆಯ ಪ್ರಿಯಕರ ಅನಿಲ್ ಹಾಗೂ ವೆಂಕಟ ಸಾಯಿ ಅಲಿಯಾಸ್ ಬಂಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂವರ ವಿರುದ್ಧ ಕೊಲೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



