ಬೆಂಗಳೂರು/ಚಿಕ್ಕಬಳ್ಳಾಪುರ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಘೋಷಣೆ ಕೂಗಿ ಚಪ್ಪಲಿ ಎಸೆದ ಘಟನೆ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು, “ಶಾಸಕರಿಗೆ ಅಪಮಾನವಾಗಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸಬಹುದಿತ್ತು. ಆದರೆ 800 ಜನರಿದ್ದ ಸ್ಥಳದಲ್ಲಿ ಕೇವಲ ಈ ನಾಲ್ವರ ವಿರುದ್ಧವೇ ಪ್ರಕರಣ ದಾಖಲಿಸಿರುವುದೇಕೆ?” ಎಂದು ಚಿಕ್ಕಬಳ್ಳಾಪುರ ಪೊಲೀಸರನ್ನು ಪ್ರಶ್ನಿಸಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಪೊಲೀಸರಿಗೆ ಸೂಚಿಸಿರುವ ನ್ಯಾಯಾಲಯ, ಮೋಹನ್ ರಾಜ್, ಅಕ್ಕುಲ ರೆಡ್ಡಿ, ಟಿ.ಎಸ್.ಮಹೇಂದ್ರ ಮತ್ತು ಟಿ.ಎಸ್.ಪ್ರಕಾಶ್ ವಿರುದ್ಧದ ಪ್ರಕರಣಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಏನಾಗಿತ್ತು ಘಟನೆ?
ಚಿಕ್ಕಬಳ್ಳಾಪುರದಲ್ಲಿ ಜೂನ್ 27ರಂದು ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಕುರಿತು ಶಾಸಕ ಪ್ರದೀಪ್ ಈಶ್ವರ್ ನೀಡಿದ್ದ ಹೇಳಿಕೆಗೆ ಆಕ್ರೋಶಗೊಂಡಿದ್ದ ಜೆಡಿಎಸ್ ಕಾರ್ಯಕರ್ತರು, ಕನ್ನಡ ಭವನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದ್ದರು.
ಶಾಸಕರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಘೋಷಣೆ ಕೂಗಿದ ಹಿನ್ನೆಲೆ ಗೊಂದಲ ಉಂಟಾಗಿತ್ತು. ಬಳಿಕ ಸ್ವಾಮೀಜಿ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾಗಿತ್ತು.
ಆದರೆ ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಗಲಾಟೆ ಆರಂಭವಾಗಿದ್ದು, ಶಾಸಕ ಪ್ರದೀಪ್ ಈಶ್ವರ್ ಅವರು ಕಾರಿನ ಸನ್‌ರೂಫ್ ತೆರೆದು ನಿಂತು ತೆರಳುತ್ತಿದ್ದ ವೇಳೆ ಪ್ರತಿಭಟನಾಕಾರರೊಂದಿಗೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಈ ವೇಳೆ ಕೆಲವರು ಶಾಸಕರ ವಿರುದ್ಧ ಘೋಷಣೆ ಕೂಗಿ ಚಪ್ಪಲಿ ಎಸೆದ ಆರೋಪ ಕೇಳಿಬಂದಿತ್ತು. ಪೊಲೀಸರು ಸ್ಥಳದಲ್ಲೇ ಕೆಲವರನ್ನು ವಶಕ್ಕೆ ಪಡೆದಿದ್ದರು.
ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಠಾಣೆಯ ಪಿಎಸ್‌ಐ ಅಮರ್ ಅವರು ಸ್ವಯಂಪ್ರೇರಿತವಾಗಿ (Suo Moto) ಪ್ರಕರಣ ದಾಖಲಿಸಿದ್ದರು. ಚಪ್ಪಲಿ ಎಸೆದು, ಅವಾಚ್ಯ ಪದಗಳಿಂದ ನಿಂದನೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು.
ಇದೀಗ ಹೈಕೋರ್ಟ್ ಪ್ರಕರಣಕ್ಕೆ ತಡೆ ನೀಡಿದ್ದು, ಮುಂದಿನ ವಿಚಾರಣೆ ಬಳಿಕ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಗಲಿದೆ.



