ದಾವಣಗೆರೆ: ಆನ್‌ಲೈನ್ ಗೇಮ್ (Online Game) ಆಡುವಂತೆ ಹಾಗೂ ಅದಕ್ಕೆ ಹಣ ಹಾಕುವಂತೆ ಸ್ನೇಹಿತರು ನೀಡಿದ ಒತ್ತಡ ಮತ್ತು ಕಿರುಕುಳಕ್ಕೆ ಬೇಸತ್ತು 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಪಾಂಡೊಮಟ್ಟಿಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಮನೋಜ್ ಟಿ.ಆರ್. (13) ಎಂದು ಗುರುತಿಸಲಾಗಿದೆ. ಗ್ರಾಮದ ನಾಲ್ವರು ಬಾಲಕರು ಫ್ರೀ ಫೈರ್ ಗೇಮ್ ಆಪ್‌ನಲ್ಲಿ ಹಣ ಹಾಕುವಂತೆ ಮನೋಜ್‌ಗೆ ಒತ್ತಾಯಿಸುತ್ತಿದ್ದರು. ಹಣ ತರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ.
ಸ್ನೇಹಿತರ ಒತ್ತಾಯದ ಹಿನ್ನೆಲೆಯಲ್ಲಿ ಮನೋಜ್ ಮನೆಯಲ್ಲಿ ಇಟ್ಟಿದ್ದ ಸುಮಾರು 4 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿದ್ದ ಎಂದು ತಿಳಿದುಬಂದಿದೆ. ಬಳಿಕ ಮನೆಯಲ್ಲಿ ಹಣದ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ, ನಾಲ್ವರು ಬಾಲಕರು ಹಣ ತರುವಂತೆ ಮನೋಜ್‌ಗೆ ಒತ್ತಾಯಿಸಿರುವುದು ಕುಟುಂಬಸ್ಥರಿಗೆ ಗೊತ್ತಾಗಿದೆ.
ಹಣಕ್ಕಾಗಿ ಸ್ನೇಹಿತರು ಮನೋಜ್ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಸ್ನೇಹಿತರ ಕಿರುಕುಳ ಹಾಗೂ ಬೆದರಿಕೆಯಿಂದ ಮನನೊಂದು ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಾಲಕನ ಆತ್ಮಹತ್ಯೆಗೆ ನಿಖರ ಕಾರಣವೇನು ಹಾಗೂ ಪ್ರಕರಣದಲ್ಲಿ ಆರೋಪಿಗಳ ಪಾತ್ರ ಏನು ಎಂಬುದರ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

