ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಅಬ್ಬರಿಸಿದ್ದ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿರಲಿಲ್ಲ. ಆದರೆ ಜುಲೈ ಆರಂಭದಿಂದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಇದೀಗ ಜುಲೈ ಎರಡನೇ ವಾರದಿಂದ ಮುಂಗಾರು ಚಟುವಟಿಕೆಗಳು ಸ್ವಲ್ಪ ಮಟ್ಟಿಗೆ ಕ್ಷೀಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ನಡುವೆ ಜುಲೈ 9ರಂದು ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಭಾಗದಲ್ಲಿ ಗಂಟೆಗೆ 50 ರಿಂದ 60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಭಾರಿ ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ.
ಇನ್ನು ಮೈಸೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಡಗಿನಲ್ಲಿ ಭಾರಿ ಮಳೆ ದಾಖಲು:
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಂಗೂರಿನಲ್ಲಿ ಅತಿ ಹೆಚ್ಚು 211.5 ಮಿ.ಮೀ. ಮಳೆ ದಾಖಲಾಗಿದೆ. ಶಿವಮೊಗ್ಗದ ತೀರ್ಥಹಳ್ಳಿಯ ಹೊನ್ನೆತಾಳುವಿನಲ್ಲಿ 199.5 ಮಿ.ಮೀ., ಚಿಕ್ಕಮಗಳೂರಿನ ಕೊಪ್ಪದ ಕಮ್ಮರಡಿಯಲ್ಲಿ 194 ಮಿ.ಮೀ., ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಹಲಗೇರಿಯಲ್ಲಿ 179.5 ಮಿ.ಮೀ. ಮಳೆಯಾಗಿದೆ.
ಇದೇ ರೀತಿ ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಲವಂತಿಗೆಯಲ್ಲಿ 165.5 ಮಿ.ಮೀ., ಹಾಸನದ ಸಕಲೇಶಪುರ ಭಾಗದಲ್ಲಿ 163.5 ಮಿ.ಮೀ. ಹಾಗೂ ಉಡುಪಿಯ ಕುಂದಾಪುರದ ಮಡಾಮಕ್ಕಿಯಲ್ಲಿ 124.5 ಮಿ.ಮೀ. ಮಳೆ ದಾಖಲಾಗಿದೆ.



