HomeBengaluru Newsಪೊಲೀಸ್ ಠಾಣೆಗಳ ಸಿಸಿಟಿವಿ 24 ಗಂಟೆಯೂ ಆನ್ ಇರಬೇಕು: ಹೈಕೋರ್ಟ್ ಖಡಕ್ ಆದೇಶ

ಪೊಲೀಸ್ ಠಾಣೆಗಳ ಸಿಸಿಟಿವಿ 24 ಗಂಟೆಯೂ ಆನ್ ಇರಬೇಕು: ಹೈಕೋರ್ಟ್ ಖಡಕ್ ಆದೇಶ

For Dai;y Updates Join Our whatsapp Group

ಬೆಂಗಳೂರು: ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಒಂದು ನಿಮಿಷವೂ ಸಿಸಿಟಿವಿ ಆಫ್ ಆಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಖಡಕ್ ನಿರ್ದೇಶನ ನೀಡಿದೆ.

ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಕಿರುಕುಳ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಈ ಮಹತ್ವದ ನಿರ್ದೇಶನ ನೀಡಿದೆ. ಪ್ರಕರಣದ ತನಿಖೆ ವೇಳೆ ಕಳೆದ 11 ತಿಂಗಳಿನಿಂದ ಠಾಣೆಯ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಸಿಸಿಟಿವಿ ಕಾರ್ಯನಿರ್ವಹಿಸದಿರುವುದಕ್ಕೆ ಠಾಣೆಯಲ್ಲಿ ಯುಪಿಎಸ್ ಸಮಸ್ಯೆ ಇತ್ತು ಎಂದು ಪೊಲೀಸರು ಸಮಜಾಯಿಷಿ ನೀಡಿದ್ದರು. ಪೊಲೀಸರ ಈ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಇಂತಹ ಉತ್ತರಗಳು ಪೊಲೀಸ್ ಇಲಾಖೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತರುತ್ತವೆ ಎಂದು ಅಭಿಪ್ರಾಯಪಟ್ಟಿದೆ.

ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅವು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಕಡ್ಡಾಯವಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ರಾಜ್ಯ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ಡಿಜಿ-ಐಜಿಪಿ ಕಚೇರಿಯಿಂದಲೇ ಲೈವ್ ಮಾನಿಟರಿಂಗ್:

ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ರಿಯಲ್‌ಟೈಮ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಡಿಜಿ-ಐಜಿಪಿ ಕಚೇರಿಯಿಂದಲೇ ಲೈವ್ ಮಾನಿಟರ್ ಮಾಡುವ ವ್ಯವಸ್ಥೆ ರೂಪಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಸಿಸಿಟಿವಿ ಕ್ಯಾಮೆರಾಗಳು ಸ್ಥಗಿತಗೊಂಡರೆ ಅಥವಾ ತಾಂತ್ರಿಕ ಸಮಸ್ಯೆ ಎದುರಾದರೆ ತಕ್ಷಣವೇ ಅದನ್ನು ಸರಿಪಡಿಸುವ ವ್ಯವಸ್ಥೆ ಇರಬೇಕು. ಪೊಲೀಸ್ ಠಾಣೆಗಳಲ್ಲಿನ ವಿಚಾರಣೆ ಹಾಗೂ ಇತರ ಚಟುವಟಿಕೆಗಳ ಮೇಲೆ ನಿಗಾ ಇಡುವ ದೃಷ್ಟಿಯಿಂದ ಸಿಸಿಟಿವಿ ವ್ಯವಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಅಗತ್ಯ ಎಂದು ನ್ಯಾಯಾಲಯದ ನಿರ್ದೇಶನಗಳು ಸ್ಪಷ್ಟಪಡಿಸಿವೆ.

ವೈಟ್‌ಫೀಲ್ಡ್ ಠಾಣೆ ವಿರುದ್ಧ ಮಹಿಳೆಯ ದೂರು:

ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಸಿಬ್ಬಂದಿ ತಮ್ಮ ಮೇಲೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಶೈಲಜಾ ಎಂಬ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ತನಿಖೆ ವೇಳೆ ಠಾಣೆಯ ಸಿಸಿಟಿವಿ ಕಳೆದ 11 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಪೊಲೀಸರಿಂದ ನ್ಯಾಯಾಲಯಕ್ಕೆ ತಿಳಿದುಬಂದಿತ್ತು.

ಈ ಹಿನ್ನೆಲೆಯಲ್ಲಿ ಸಿಸಿಟಿವಿ ವ್ಯವಸ್ಥೆಯ ನಿರ್ವಹಣೆ ಕುರಿತು ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿದ ಹೈಕೋರ್ಟ್, ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ವ್ಯವಸ್ಥೆ ಕೇವಲ ಅಳವಡಿಸಿರುವುದಷ್ಟೇ ಅಲ್ಲದೆ, ಅದು ಸದಾ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು ಇಲಾಖೆಯ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img