ವಿಜಯಪುರ: ತೆರೆದ ಬಾವಿಗೆ ಕಾಲು ಜಾರಿ ಇಬ್ಬರು ಮಕ್ಕಳು ಬಿದ್ದಿದ್ದು, ಅವರನ್ನು ರಕ್ಷಿಸಲು ಬಾವಿಗೆ ಹಾರಿದ ತಂದೆಯೂ ನಾಪತ್ತೆಯಾಗಿರುವ ದುರ್ಘಟನೆ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ನಡೆದಿದೆ.
ಬಳಬಟ್ಟಿ ಗ್ರಾಮದ ತೋಟದ ಮನೆಯೊಂದರ ಬಳಿ ಈ ಘಟನೆ ನಡೆದಿದೆ. ತೋಟದ ಮನೆಯ ಸಮೀಪದಲ್ಲಿದ್ದ ತೆರೆದ ಬಾವಿಯ ಬಳಿ ತೆರಳಿದ್ದ ವೇಳೆ ಇಬ್ಬರು ಹೆಣ್ಣು ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಬಾವಿಗೆ ಬಿದ್ದ ಮಕ್ಕಳನ್ನು ಸಾಕ್ಷಿ (15) ಮತ್ತು ರಕ್ಷಿತಾ (10) ಎಂದು ಗುರುತಿಸಲಾಗಿದೆ. ಸಾಕ್ಷಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಮಕ್ಕಳು ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಅವರ ತಂದೆ ಸಾಬಣ್ಣ (40) ಕೂಡಲೇ ಅವರನ್ನು ರಕ್ಷಿಸಲು ಬಾವಿಗೆ ಜಿಗಿದಿದ್ದಾರೆ. ಆದರೆ ಸಾಬಣ್ಣ ಅವರಿಗೆ ಈಜು ಬಾರದ ಹಿನ್ನೆಲೆಯಲ್ಲಿ ಅವರೂ ನೀರಿನಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ನಿಡಗುಂದಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಬ್ಬರು ಹಾಗೂ ತಂದೆ ಸಾಬಣ್ಣ ಅವರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.
ಗ್ರಾಮಸ್ಥರು ಕೂಡ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದು, ತೆಪ್ಪದ ಮೂಲಕ ಬಾವಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಮೂವರ ಪತ್ತೆಗಾಗಿ ನಿರಂತರ ಶೋಧ ಕಾರ್ಯ ಮುಂದುವರಿದಿದೆ.
ಘಟನೆಯಿಂದ ಬಳಬಟ್ಟಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



