ಬೆಂಗಳೂರು: ರಾಜ್ಯ ಸರ್ಕಾರದ ಇಂದಿರಾ ಕಿಟ್ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇಂದಿರಾ ಕಿಟ್ ವಿತರಣೆಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ಯೋಜನೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಿ ಇಂದಿರಾ ಕಿಟ್ ವಿನ್ಯಾಸ ಮಾಡಲಾಗಿದೆ. ಈ ಕಿಟ್ನಲ್ಲಿ ಬೇಳೆ, ಎಣ್ಣೆ, ಸಕ್ಕರೆ ಮತ್ತು ಉಪ್ಪಿನಂತಹ ಅಗತ್ಯ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಅಕ್ಕಿ ವಿತರಣೆಯಲ್ಲಿ ಎದುರಾಗುತ್ತಿದ್ದ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಈ ಬದಲಾವಣೆ ತರಲಾಗಿದೆ. ರಾಜ್ಯದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜೋಳದ ಬಳಕೆ ಹೆಚ್ಚಿದ್ದು, ಅಕ್ಕಿಯ ಬಳಕೆ ಕಡಿಮೆ ಇರುವ ಕಾರಣ ಕೆಲವೊಮ್ಮೆ ಅಕ್ಕಿ ಸಮರ್ಪಕವಾಗಿ ಬಳಕೆಯಾಗದೆ ಕಾಳಸಂತೆಗೆ ಹೋಗುವ ಪರಿಸ್ಥಿತಿ ಎದುರಾಗುತ್ತಿತ್ತು ಎಂದು ಹೇಳಿದರು.
ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕುಟುಂಬಗಳಿಗೆ ಅಗತ್ಯವಾಗಿರುವ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ತಲುಪಿಸುವ ಉದ್ದೇಶದಿಂದ ಇಂದಿರಾ ಕಿಟ್ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇಂದಿರಾ ಕಿಟ್ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಗೂ ಕುಟುಂಬದ ಎಲ್ಲ ಸದಸ್ಯರಿಗೂ ಉಪಯುಕ್ತವಾಗಲಿದೆ. 5 ಕೆಜಿ ಅಕ್ಕಿಯ ಬದಲಿಗೆ ಈ ಕಿಟ್ ನೀಡುವುದರಿಂದ ಆಹಾರ ಪದಾರ್ಥಗಳ ಸರಿಯಾದ ಬಳಕೆಯಾಗಲಿದೆ ಮತ್ತು ಕುಟುಂಬಗಳ ಪೌಷ್ಟಿಕಾಂಶ ಭದ್ರತೆ ಹೆಚ್ಚಲಿದೆ ಎಂದು ಕೆ.ಎಚ್. ಮುನಿಯಪ್ಪ ಹೇಳಿದರು.
ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.



