ನೆಲಮಂಗಲ: ಶಾಲಾ ವಾಹನಕ್ಕೆ ಸಿಲುಕಿ 4 ವರ್ಷದ ಬಾಲಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಸನಪುರ ಬಳಿ ನಡೆದಿದೆ.
ಮೃತ ಬಾಲಕಿಯನ್ನು ತನುಶಾ ಎಂದು ಗುರುತಿಸಲಾಗಿದೆ. ಶಾಲಾ ಬಸ್ ರಿವರ್ಸ್ ತೆಗೆಯುವ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಸ್ನ ಮುಂಭಾಗದ ಚಕ್ರಕ್ಕೆ ಸಿಲುಕಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ತುಮಕೂರಿನ ಹೆಬ್ಬೂರು ಮೂಲದ ಕಿಶೋರ್ ಮತ್ತು ಮಧುಸ್ಮಿತಾ ದಂಪತಿಯ ಎರಡನೇ ಮಗು ತನುಶಾ ಎನ್ನಲಾಗಿದೆ. ಕಿಶೋರ್ ಅವರು ಶಾಂತಿನಗರದ ಆರ್ಟಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.
ಮಂಗಳವಾರ ಮಧ್ಯಾಹ್ನ ತನುಶಾಳನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದ ಕಿಶೋರ್, ಬಳಿಕ ಸಂಜೆ ಮೊದಲ ಮಗಳು ಹನಿಕಾಳನ್ನು ಕರೆತರಲು ತಾಯಿ ಮಧುಸ್ಮಿತಾ ತೆರಳಿದ್ದರು. ಈ ವೇಳೆ ತನುಶಾಳನ್ನೂ ಕರೆದುಕೊಂಡು ಹೋಗಲಾಗಿತ್ತು. ಶಾಲೆ ಬಳಿ ಆಟವಾಡುತ್ತಿದ್ದ ವೇಳೆ ರಿವರ್ಸ್ ತೆಗೆಯುತ್ತಿದ್ದ ಶಾಲಾ ಬಸ್ ಬಾಲಕಿಗೆ ಡಿಕ್ಕಿ ಹೊಡೆದಿದೆ.
ಘಟನೆಯಿಂದ ತಾಯಿಯ ಕಣ್ಣೆದುರೇ ತನುಶಾ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತದ ಬಳಿಕ ಶಾಲಾ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿದು ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಾಣಾವರ ಸಂಚಾರಿ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ, ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಶವಾಗಾರಕ್ಕೆ ರವಾನಿಸಿದ್ದಾರೆ.
ಬಾಲಕಿಗೆ ಬಲಿ ಪಡೆದ ಶಾಲಾ ವಾಹನವು ಕಿಡ್ಸ್ ಇಂಟರ್ನ್ಯಾಷನಲ್ ಶಾಲೆಗೆ ಸೇರಿದ್ದು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



