ಮುಂಬೈ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ರಾಯಗಢ ಜಿಲ್ಲೆಯ ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)ನ ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಘಟಕಕ್ಕೆ ಪ್ರವಾಹದ ನೀರು ನುಗ್ಗಿದ್ದು, ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು ನೀರಿನಲ್ಲಿ ತೇಲಿ ಹೋಗಿರುವ ಘಟನೆ ನಡೆದಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆತಂಕಕ್ಕೆ ಕಾರಣವಾಗಿವೆ.
ಪಾತಾಳಗಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿ ಘಟಕ ಜಲಾವೃತಗೊಂಡ ಪರಿಣಾಮ ಸಿಲಿಂಡರ್‌ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ತೇಲಿ ಹೋದ ಸಿಲಿಂಡರ್‌ಗಳಲ್ಲಿ ಕೆಲವು ಗ್ಯಾಸ್ ತುಂಬಿದ್ದರೆ, ಇನ್ನೂ ಕೆಲವು ಖಾಲಿಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದ್ದು, ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ನದಿಯಲ್ಲಿ ಅಥವಾ ದಡದಲ್ಲಿ ಸಿಲಿಂಡರ್‌ಗಳು ಕಂಡುಬಂದರೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಅವುಗಳನ್ನು ಮುಟ್ಟಬಾರದು, ಸ್ಥಳಾಂತರಿಸಬಾರದು ಅಥವಾ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ರಾಯಗಢ ಜಿಲ್ಲಾಧಿಕಾರಿ ಕಿಶನ್ ಜವಾಲೆ ಎಚ್ಚರಿಕೆ ನೀಡಿದ್ದಾರೆ.
ಸಿಲಿಂಡರ್‌ಗಳ ಸ್ಥಿತಿ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲದ ಕಾರಣ ಅವು ಅಪಾಯಕಾರಿಯಾಗಿರುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಸಿಲಿಂಡರ್ ಕಂಡುಬಂದರೆ ತಕ್ಷಣ ಸ್ಥಳೀಯ ಆಡಳಿತ ಅಥವಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಾರ್ವಜನಿಕರು ಅನಗತ್ಯವಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳದಂತೆ ಹಾಗೂ ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



