ಬೆಂಗಳೂರು: ನಮ್ಮ ಮೆಟ್ರೋದ ಗ್ರೀನ್ ಲೈನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತುರ್ತು ಕ್ರಮ ಕೈಗೊಂಡಿದ್ದು, ತಾಂತ್ರಿಕ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.
ಮಾದಾವರದಿಂದ ತಲಘಟ್ಟಪುರದವರೆಗೆ ಸುಮಾರು 33 ಕಿಲೋಮೀಟರ್ ವ್ಯಾಪ್ತಿಯ ಗ್ರೀನ್ ಲೈನ್‌ನಲ್ಲಿ ಮೆಟ್ರೋ ಸೇವೆಗಳಲ್ಲಿ ವಿಳಂಬ ಉಂಟಾಗಿದೆ. ಬೆಳಗ್ಗೆ 8:50ರ ಸುಮಾರಿಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೀಕ್ ಅವರ್ ವೇಳೆ ಮೆಟ್ರೋ ಸೇವೆ ವ್ಯತ್ಯಯಗೊಂಡ ಕಾರಣ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೆಟ್ರೋ ಸೇವೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಅನೇಕರು ಬದಲಿ ಸಾರಿಗೆ ವ್ಯವಸ್ಥೆಗಳಾದ ಬಿಎಂಟಿಸಿ ಬಸ್, ಕ್ಯಾಬ್ ಹಾಗೂ ಆಟೋಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ BMRCL, ತಾಂತ್ರಿಕ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸುವ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಮೆಟ್ರೋ ಸಂಚಾರವನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.
ಗಮನಾರ್ಹ ಸಂಗತಿಯೆಂದರೆ, ಕಳೆದ 15 ದಿನಗಳ ಹಿಂದಷ್ಟೇ ನೇರಳೆ ಮಾರ್ಗದಲ್ಲೂ ಇದೇ ರೀತಿಯ ತಾಂತ್ರಿಕ ದೋಷ ಉಂಟಾಗಿ ಮೆಟ್ರೋ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದೀಗ ಮತ್ತೊಮ್ಮೆ ಗ್ರೀನ್ ಲೈನ್‌ನಲ್ಲಿ ಸಮಸ್ಯೆ ಎದುರಾಗಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.



