HomePolitics Newsಬಿಜೆಪಿಯ ಒಬ್ಬ ನಾಯಕನ ಮಗನೂ RSSನಲ್ಲಿ ಪೂರ್ಣಕಾಲಿಕ ಪ್ರಚಾರಕನಾಗಿಲ್ಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬಿಜೆಪಿಯ ಒಬ್ಬ ನಾಯಕನ ಮಗನೂ RSSನಲ್ಲಿ ಪೂರ್ಣಕಾಲಿಕ ಪ್ರಚಾರಕನಾಗಿಲ್ಲ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

For Dai;y Updates Join Our whatsapp Group

ಬೆಂಗಳೂರು: ಬಿಜೆಪಿಯ ಯಾವುದೇ ಪ್ರಮುಖ ನಾಯಕರ ಮಗ ಕೂಡ ಆರ್‌ಎಸ್‌ಎಸ್‌ನ ಪೂರ್ಣಕಾಲಿಕ ಪ್ರಚಾರಕರಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಕೊಲೆ ಪ್ರಕರಣಗಳಲ್ಲಿ ಜೈಲು ಸೇರಿದವರಿಗೆ ಸಂಘ ಪರಿವಾರದಿಂದ ಯಾವುದೇ ನೆರವು ಸಿಗುತ್ತಿಲ್ಲ ಎಂಬ ಹಿಂದೂ ಸಂಘಟನೆಗಳ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ಇದೇ ವಿಚಾರವನ್ನು ನಾನು ಬಹಳ ಹಿಂದಿನಿಂದಲೂ ಹೇಳುತ್ತಿದ್ದೇನೆ. ಈಗ ಅದನ್ನೇ ಅವರೇ ಒಪ್ಪಿಕೊಳ್ಳುತ್ತಿರುವಂತಾಗಿದೆ” ಎಂದು ಹೇಳಿದರು.

“ಧರ್ಮ ರಕ್ಷಣೆ, ಗೋ ರಕ್ಷಣೆ, ಸಂಘಟನೆಗಳ ಚಟುವಟಿಕೆಗಳಿಗೆ ಬಡವರ ಮಕ್ಕಳನ್ನು ಕಳುಹಿಸಲಾಗುತ್ತದೆ. ಆದರೆ ಬಿಜೆಪಿ ನಾಯಕರ ಮಕ್ಕಳು ಏನು ಮಾಡುತ್ತಿದ್ದಾರೆ? ಬಿಜೆಪಿಯ ಒಬ್ಬ ನಾಯಕರ ಮಗನಾದರೂ ಆರ್‌ಎಸ್‌ಎಸ್‌ನ ಪೂರ್ಣಕಾಲಿಕ ಪ್ರಚಾರಕರಾಗಿದ್ದರೆ ತೋರಿಸಿ” ಎಂದು ಸವಾಲು ಹಾಕಿದರು.

“ವಿಜಯದಶಮಿ ದಿನ ಮಾತ್ರ ಗಣವೇಷ ಧರಿಸುವುದು ಬೇರೆ, ಪೂರ್ಣಕಾಲಿಕ ಪ್ರಚಾರಕರಾಗಿ ಕೆಲಸ ಮಾಡುವುದು ಬೇರೆ. ಕೋಮು ಗಲಭೆಗಳಲ್ಲಿ ಸಾವಿಗೀಡಾಗುವವರು ಸಾಮಾನ್ಯ ಕುಟುಂಬಗಳ ಯುವಕರೇ ಹೊರತು ನಾಯಕರ ಮಕ್ಕಳು ಅಲ್ಲ” ಎಂದು ಅವರು ಟೀಕಿಸಿದರು.

ಪರೇಶ್ ಮೆಸ್ತಾ ಪ್ರಕರಣವನ್ನು ಉಲ್ಲೇಖಿಸಿದ ಖರ್ಗೆ, “ಅವರ ಹೆಸರಿನಲ್ಲಿ ಚುನಾವಣೆ ಗೆದ್ದರು. ಆದರೆ ನಂತರ ಅವರ ಕುಟುಂಬದವರನ್ನು ಎಷ್ಟು ಬಾರಿ ಭೇಟಿ ಮಾಡಿದ್ದಾರೆ? ಅನೇಕ ಯುವಕರು ಸಾವನ್ನಪ್ಪಿದ್ದಾರೆ. ಆದರೆ ಅವರ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸುವವರು ಯಾರು?” ಎಂದು ಪ್ರಶ್ನಿಸಿದರು.

ಯುವಕರಿಗೆ ಸಲಹೆ ನೀಡಿದ ಅವರು, “ಉದ್ಯೋಗ ಹುಡುಕಿ, ಕುಟುಂಬಕ್ಕೆ ಆಸರೆಯಾಗಿರಿ. ಕೋಮು ಗಲಭೆಗಳಲ್ಲಿ ಭಾಗಿಯಾಗಬೇಡಿ. ನಿಮ್ಮನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ದಲಿತರು ಮತ್ತು ಹಿಂದುಳಿದ ವರ್ಗದ ಯುವಕರನ್ನೇ ಹೆಚ್ಚಾಗಿ ಇಂತಹ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ” ಎಂದು ಹೇಳಿದರು.

“ರೈತರ ಸಮಸ್ಯೆ, ನಿರುದ್ಯೋಗ, ಬೆಲೆ ಏರಿಕೆ ಮೊದಲಾದ ಜನಸಾಮಾನ್ಯರ ವಿಚಾರಗಳಲ್ಲಿ ಸಂಘ ಪರಿವಾರ ಹೋರಾಟ ನಡೆಸಿದೆಯೇ? ಇಂತಹ ವಿಷಯಗಳ ಬದಲಿಗೆ ಬೇರೆ ವಿಚಾರಗಳಿಗೆ ಮಾತ್ರ ಪ್ರಚೋದನೆ ನೀಡಲಾಗುತ್ತಿದೆ” ಎಂದು ಆರೋಪಿಸಿದರು.

“ನನಗೆ ಬೆದರಿಕೆ ಹಾಕಿದ್ದ ಒಬ್ಬ ಯುವಕನಿಗೆ ಕೂಡ ಸಂಘಟನೆಗಳು ವಕೀಲರ ನೆರವು ನೀಡಲಿಲ್ಲ. ಆತನ ತಾಯಿ ಮನವಿ ಮಾಡಿದ ಕಾರಣ ನಾನು ಸಹಾಯ ಮಾಡಿದ್ದೆ. ಯುವಕರನ್ನು ಮುಂದೆ ತಳ್ಳಿದ ಬಳಿಕ ಅವರ ನೆರವಿಗೆ ಯಾರೂ ಬರುವುದಿಲ್ಲ. ಆದ್ದರಿಂದ ಯುವಕರು ಎಚ್ಚರಿಕೆಯಿಂದ ಇರಬೇಕು” ಎಂದು ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img